ಚಿಕ್ಕಮಗಳೂರು: ಸಾಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಕಾರ್ಯನಿರ್ವಹಿಸುವ ಪೊಲೀಸರೊಂದಿಗೆ ಸಾರ್ವಜನಿಕರು ಉತ್ತಮ ಭಾಂದವ್ಯವನ್ನಿರಿಸಿಕೊಂಡು ಅವರ ಕರ್ತವ್ಯಕ್ಕೆ ಸಹಕಾರ ನೀಡಿದರೆ ಸುಸ್ಥಿರ ಸಮಾಜ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ರಾಮನಹಳ್ಳಿ ಪೊಲೀಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಾಗರೀಕ ಬಂದೂಕು ಶಿಬಿರದ ಸಮಾರೋಪ ಸಮಾರಂಭ ಮತ್ತು ಯಶಸ್ವಿಯಾಗಿ ಬಂದೂಕು ತರಬೇತಿ ಪೂರ್ಣಗೊಳಿಸಿದ ನಾಗರೀಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆಯು ಭದ್ರತೆ ಹಾಗೂ ರಕ್ಷಣೆ ಜೊತೆಗೆ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ನಿಷ್ಠೆಯಿಂದ ಕರ್ತವ್ಯದಲ್ಲಿ ತೊಡಗಿಕೊಂಡಿದೆ ಪ್ರತಿಯೊಬ್ಬ ನಾಗರೀಕನೂ ಕಾನೂನು ಅರಿತು ಪಾಲಿಸಿದಲ್ಲಿ ಅಪರಾಧ ಸಂಖ್ಯೆ ಕ್ಷೀಣಿಸುವುದರೊಂದಿಗೆ ಸ್ವಾಸ್ಥ್ಯ ಸಮಾಜವು ನಿರ್ಮಾಣವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದ ಎಲ್ಲಾ ಸ್ಥಿತಿಗತಿಗಳು, ಆಗು-ಹೋಗುಗಳನ್ನು ಸ್ಫಷ್ಟವಾಗಿ ಅರಿತ ವಿದ್ಯಾವಂತರೇ ಸೈಬರ್ ಕ್ರೈಂನಿಂದ ತಮ್ಮ ಹಣ ಕಳೆದುಕೊಂದು ವಂಚಿತರಾಗಿದ್ದಾರೆ. ಯಾವುದೇ ಅಪರಿಚಿತ ಸಂಖ್ಯೆಯಿಂದ ಕರೆಗಳು ಬಂದಲ್ಲಿ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ ೧೯೩೦ಗೆ ಕರೆ ಮಾಡಿ ಮಾಹಿತಿ ನೀಡಿ ಅವುಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯೂ ಕಾಫಿ ಬೆಳೆಗೆ ಪ್ರಸಿದ್ಧಿಯಾಗಿದ್ದು ಇದು ಉದ್ಯೋಗ ಸೃಷ್ಠಿಗೂ ಸಹಕಾರಿಯಾಗಿದೆ. ಜಿಲ್ಲೆಯಲ್ಲಿರುವ ವಿವಿಧ ಕಾಫಿ ಎಸ್ಟೇಟ್ಗಳಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಕೂಲಿ ಕಾರ್ಮಿಕರು ಉದ್ಯೋಗ ಅರಿಸಿ ಬರುತ್ತಾರೆ. ಕಾಫಿ ಎಸ್ಟೇಟ್ ಮಾಲೀಕರುಗಳು ತಮ್ಮಲ್ಲಿಗೆ ಬರುವ ಹೊರ ರಾಜ್ಯಗಳ ಕೂಲಿ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಿ ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕು. ಇದರಿಂದ ಕಾರ್ಮಿಕರ ಹಿನ್ನೆಲೆಯನ್ನು ಗುರುತಿಸಿ ಸಂಭವಿಸಬಹುದಾದ ಅಪರಾಧಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.
ಅಕ್ರಮ ಗಾಂಜ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಗಾಂಜ ಸೇವನೆ ಹಾಗೂ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಕರ್ನಾಟಕ ಡ್ರಗ್ ಫಿ ಆಪ್ ಮೂಲಕ ದೂರು ನೀಡಬೇಕು. ಇದರಲ್ಲಿ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಅಕ್ರಮ ವೆಸಗುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ತುರ್ತು ಕಾರ್ಯಗಳಿಗೆ ೧೧೨ ಗೆ ಕರೆ ಮಾಡಿ ತಿಳಿಸಿದಲ್ಲಿ ಕರೆ ಮಾಡಿದ ೨೦ ನಿಮಿಷದೊಳಗಾಗಿ ತುರ್ತು ಪೊಲೀಸ್ ಸಿಬ್ಬಂಧಿಗಳು ಸ್ಫಂಧಿಸುತ್ತಾರೆ ಎಂದರು.
ಜಿಲ್ಲೆಯೂ ಭೌಗೋಳಿಕವಾಗಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು ವನ್ಯ ಜೀವಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ರಕ್ಷಣೆಯ ಉದ್ದೇಶದಿಂದ ಇಲಾಖೆ ವತಿಯಿಂದ ಬಂದೂಕು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ ತರಬೇತಿ ನೀಡಲಾಗುತ್ತಿದೆ. ಬಂದೂಕುದಾರರು ತಮಗೆ ನೀಡಿರುವ ಬಂದೂಕು ಪರವಾನಗಿಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಬಂದೂಕು ಸುರಕ್ಷತೆ ಹಾಗೂ ನಿರ್ವಹಣೆಗಳ ಕುರಿತು ಹೆಚ್ಚು ಎಚ್ಚರವಾಗಿರಬೇಕು. ತರಬೇತಿ ಸಮಯದಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು ಚಾಚು ತಪ್ಪದೆ ಪಾಲಿಸಿ ಸಂದಿಗ್ಧ ಸ್ಥಿತಿಯಲ್ಲಿ ಸ್ವಯಂ ಪ್ರೇರಿತರಾಗಿ ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಭಾಂದವ್ಯದ ಜೊತೆ ಆರೋಗ್ಯಯುತ ಸಮಾಜವು ಸ್ಥಾಪನೆಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷಿರಸಾಗರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಇಲ್ಲಿ ತರಬೇತಿಯೊಂದಿಗೆ ಪರವಾನಗಿಯನ್ನು ಪಡೆದು ಬಂದೂಕುಗಳನ್ನು ಬಳಕೆ ಮಾಡುವ ಪ್ರತಿಯೊಬ್ಬರು ಅದರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಬಂದೂಕುಗಳನ್ನು ಕೇವಲ ತಮ್ಮ ರಕ್ಷಣೆಗೆ ಮಾತ್ರ ಬಳಸಿಕೊಳ್ಳಿ ಯಾವುದೇ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗಿಕೊಳ್ಳದೇ ಹಾಗೂ ತಮ್ಮ ಬಂದೂಕುಗಳನ್ನು ಇತರರು ಬಳಕೆ ಮಾಡದಂತೆ ಎಚ್ಚರವಹಿಸಬೇಕು ಎಂದರು.
ಪ್ರಾಣಿಗಳಿಂದ ಯಾವುದೇ ಪ್ರಾಣ ಹಾನಿಯಾದ ಪ್ರಕರಣಗಳಿಗೆ ಸಕಾಲದಲ್ಲಿ ಪರಿಹಾರ ನೀಡಲಾಗುತ್ತಿದೆ. ಬೆಳೆ ನಾಶ ಹಾಗೂ ಪ್ರಕರಣಳಿಗೆ ಸಮೀಕ್ಷೆ ನಡೆಸಿ ಅತಿ ಶೀಘ್ರವಾಗಿ ಪರಿಹಾರ ಒದಗಿಸಿಕೊಡುವ ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದೆ. ಜಿಲ್ಲೆಯಲ್ಲಿ ಆನೆ ದಾಮ ನಿರ್ಮಿಸಲು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗಿದೆ ಇದರಿಂದ ಆನೆಗಳ ಸ್ಥಳಾಂತರ ಕಾರ್ಯಗಳು ವೇಗಗತಿಯಲ್ಲಿ ಸಾಗುತ್ತವೆ ಎಂದ ಅವರು ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಬುದ್ಧಿ ಜೀವಿಗಳಾದ ನಾವುಗಳು ಪರಿಸರ ಕಾಳಜಿ ಹೊಂದಿರಬೇಕು. ಅರಣ್ಯ ಉಳಿದರೆ ಪ್ರತಿಯೊಂದು ಜೀವಿಯೂ ಸುರಕ್ಷಿತವಾಗಿರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಸುಮಂತ್. ಡಿ.ಐ.ಆರ್ ಸಹದೇವ್ ಎಸ್.ವೈ, ಬಂದೂಕು ತರಬೇತಿದಾರರಾದ ಅಬ್ದುಲ್ರೆಹಮಾನ್, ಸತೀಶ್, ಪ್ರಸನ್ನ ಜಿ.ಕೆ., ಗಂಗಾಧರ್ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Closing ceremony of the Civilian Firearms Camp