ಚಿಕ್ಕಮಗಳೂರು: ಸಾರ್ವಜನಿಕರ ಬೇಡಿಕೆಗಳನ್ನು ಅರಿತು ಪೂರೈಸುವುದರ ಜೊತೆಗೆ ಅವರ ಉತ್ತಮ ಜೀವನ ನಿರ್ವಹಣೆಗೆ ಸಹಕರಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರಿನಿಂದ ಕಳಸಾಪುರ ಮಾರ್ಗವಾಗಿ ಬೆಂಗಳೂರಿಗೆ, ಹಾಗೂ ಸಗನೀಪುರದಿಂದ ಸಂಚರಿಸುವ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಮಾತನಾಡಿದ ಅವರು ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ ಮಹಿಳಾ ಸಬಲೀಕರಣಕ್ಕೆ ದಾಪುಗಾಲಿಟ್ಟಿದೆ ಎಂದರು.
ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣವನ್ನು ನೀಡಿರುವುದು ಮಹಿಳೆಯರ ಆರ್ಥಿಕ ಉನ್ನತಿಗೂ ಕಾರಣವಾಗಿದೆ. ಸಗನೀಪುರ ಗ್ರಾಮದ ಅನೇಕರು ಕೃಷಿ ಅವಲಂಬಿತರಾಗಿದ್ದು ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ನಗರದಲ್ಲಿನ ಶಾಲೆಗಳಿಗೆ ತೆರಳಿ ವಿದ್ಯಾಭ್ಯಾಸ ನಿರ್ವಹಿಸಲು ಆಗುತ್ತಿರುವ ಅಡಚಣೆಯನ್ನು ಗಮನಿಸಿ ಇಂದು ಈ ಗ್ರಾಮಕ್ಕೆ ವಿಶೇಷ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಬೇಕು. ಈ ಭಾಗದಲ್ಲಿ ಬಸ್ ನಿಲ್ದಾಣದ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಬಸ್ ನಿರ್ಮಾಣ ಕಾಮಗಾರಿಯ ಕುರಿತು ಕ್ರಮ ವಹಿಸಲಾಗುವುದು. ಅಧಿಕಾರಿಗಳು ಸಮಯ ನಿಗಧಿ ಮಾಡಿ ಸಮಯದ ವೇಳಾಪಟ್ಟಿಯನ್ನು ನೀಡಿ ಬಸ್ ಸೂಕ್ತ ರೀತಿಯಲ್ಲಿ ಸಂಚರಿಸುವಂತೆ ಸೂಚಿಸಿದರು.
ಜಗದೀಶ್ ಕುಮಾರ್ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ. ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಚಿಕ್ಕಮಗಳೂರಿನಿಂದ ಕಳಸಾಪುರ, ಜಾವಗಲ್, ಬಾಣಾವರ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಕಾರ್ಯಚರಣೆಗೊಳ್ಳುವ ನೂತನ ಬಸ್ಗೆ ಇಂದು ಚಾಲನೆ ನೀಡಿದ್ದು ಪ್ರತಿಯೊಬ್ಬರು ಇದರ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ. ಎ.ಎನ್ ಮಹೇಶ್, ಜಯರಾಜು ಅರಸು, ಮೂರ್ತಿ, ಯತೀಶ್, ಸಿದ್ದರಾಮು, ಆನಂದರಾಜು, ನಾಗೇಶ್, ಹಂಪಾಪುರ ಮಂಜೇಗೌಡ ಉಪಸ್ಥಿತರಿದ್ದರು.
MLA gives green signal for new bus service