ಚಿಕ್ಕಮಗಳೂರು: ಕೆಲವೇ ವ್ಯಕ್ತಿಗಳು ಭೌತಿಕವಾಗಿ ನಮ್ಮನ್ನಗಲಿದರೂ ಅವರ ವ್ಯಕ್ತಿತ್ವದ ನೆನಪುಗಳು ನಮ್ಮ ಮನದಂಗಳದಲ್ಲಿ ಸದಾ ಇರುತ್ತವೆ. ಹೀಗೆ ಆಗಾಗ ನೆನಪಿಗೆ ಬರುವ ವ್ಯಕ್ತಿತ್ವ ಹಿ.ನಾ.ತಿಪ್ಪೇಸ್ವಾಮಿ ಅವರದು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಬೆಳವಾಡಿಯ ಹಿ.ನಾ.ತಿಪ್ಪೇಸ್ವಾಮಿ ಕುಟುಂಬ ಹಾಗೂ ಉದ್ಭವ ಪ್ರಕಾಶನ ಟ್ರಸ್ಟ್ ಏರ್ಪಡಿಸಿದ್ದ ತಿಪ್ಪೇಸ್ವಾಮಿ ಅವರ ನೂರರ ಸಂಸ್ಮರಣೆ ಮತ್ತು ಡಾ.ಬೆಳವಾಡಿ ಮಂಜುನಾಥ್ ಅವರ ಪಿಎಚ್.,ಡಿ ಪದವಿಯ ಸಂಶೋಧನಾ ಪ್ರಬಂಧ `ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ’ದ ಕೃತಿ ಬಿಡುಗಡೆ ಸಮಾರಂಭದಲ್ಲಿ ತಿಪ್ಪೇಸ್ವಾಮಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಸಮಾಜಮುಖಿ ವ್ಯಕ್ತಿತ್ವದ ಚಟುವಟಿಕೆಗಳು, ಅವರ ಸ್ವಭಾವ, ಮಾತು ಪ್ರತಿಯೊಂದು ಸಹ ನೆನಪನ್ನು ಮೊಗೆದು ನೀಡುತ್ತದೆ. ಇಂಥ ವ್ಯಕ್ತಿಗಳ ಸಾಲಿಗೆ ಸೇರಿದವರು ತಿಪ್ಪೇಸ್ವಾಮಿ ಎಂದು ಅವರು ನುಡಿದರು.
ತಿಪ್ಪೇಸ್ವಾಮಿ ಅನ್ಯಾಯಕ್ಕೆ ಎಂದೂ ತಲೆಬಾಗಿದವರಲ್ಲ. ಮನೆಯವರಿಂದಾಗಲಿ ಅಥವಾ ಹೊರಗಿನವರಿಂದಾಗಲಿ ಅನ್ಯಾಯವಾಗುವುದನ್ನು ಸಹಿಸದೆ ತೀವ್ರವಾಗಿ ವಿರೋಧಿಸುತ್ತಿದ್ದರು. ಅವರಿದ್ದ ರಾಜಕೀಯ ಪಕ್ಷದಲ್ಲೂ ಎಂದೂ ಸಹ ಅನ್ಯಾಯ ಮತ್ತು ಭ್ರಷ್ಟಾಚಾರದ ಪ್ರಸಂಗಗಳು ಎದುರಾದಲ್ಲಿ ನೇರವಾಗಿಯೇ ಪ್ರತಿಭಟಿಸುತ್ತಿದ್ದರು. ಅವರ ವ್ಯಕ್ತಿತ್ವವೇ `ವಜ್ರಾದಪಿ ಕಠೋರಾಣಿ ಮೃದುನಿಕುಸುಮಾದಪಿ’ ಎನ್ನುವಂತಿತ್ತು. ಮೃದುತ್ವ ಮತ್ತು ಕಾಠಿಣ್ಯ ಅವರ ವ್ಯಕ್ತಿತ್ವದ ಹಿರಿಮೆ. ತಿಪ್ಪೇಸ್ವಾಮಿಯವರದು ಕೊಡುವ ಕೈಯಾಗಿತ್ತೇ ಹೊರತು ಕೇಳುವ ಕೈ ಆಗಿರಲಿಲ್ಲ. ಕೆಲವೊಮ್ಮೆ ಅವರ ಕಠಿಣ ನಿರ್ಧಾರಗಳು ಮನೆಯವರನ್ನೂ ಮುಜುಗರಕ್ಕೆ ನೂಕುತ್ತಿತ್ತು. ಆದರೆ ಎಂದೂ ಸಹ ಅವರ ನಿರ್ಧಾರದಲ್ಲಿ ಬದಲಾವಣೆ ಆಗುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಕರುಣೆ ಇಲ್ಲದ ವ್ಯಕ್ತಿಯಲ್ಲ, ಸಹಾಯ ಬಯಸಿ ಬಂದವರ ನೆರವಿಗೂ ಧಾವಿಸುವ ಮೃದು ಸಹೃದಯಿ ಅವರು ಎಂದು ತಿಳಿಸಿದರು.
ಡಾ.ಬೆಳವಾಡಿ ಮಂಜುನಾಥ್ ವಿರಚಿತ ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ ಮಹಾಪ್ರಬಂಧ ಕುರಿತು ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ್ ಮಾತನಾಡಿ, ಇಂದು ಬರುತ್ತಿರುವ ಪಿಎಚ್.,ಡಿ ಮಹಾ ಪ್ರಬಂಧಗಳು ತಮ್ಮ ಪ್ರೌಢತೆಯನ್ನು ಕಳೆದುಕೊಳ್ಳುತ್ತಿವೆ. ಆದರೆ ಸತ್ಯವಿಠಲ ಅವರ ಸಮಗ್ರ ಕಾವ್ಯಗಳ ಕುರಿತ ಈ ಮಹಾಪ್ರಬಂಧ ಅತ್ಯಂತ ಆಳವಾದ ಅಧ್ಯಯನ ತೌಲನಿಕತೆಯಿಂದ ಕೂಡಿದೆ ಎಂದು ಹೇಳಿದರು.
ಮಂಜುನಾಥ್ ಅವರ ಈ ಬೃಹತ್ಕೃತಿ ಅವರ ಮಹತ್ತರ ಸಾಧನೆಯ ದ್ಯೋತಕ. ಮಂಜುನಾಥ್ ಈಗಾಗಲೇ ಪ್ರೌಢ ಲೇಖಕರಾಗಿ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ. ಅವರ ೩೮ ಸ್ವತಂತ್ರ ಕೃತಿಗಳು ಮತ್ತು ೩೭ ಸಂಪಾದನಾ ಗ್ರಂಥಗಳು ಹೊರ ಬಂದಿದ್ದು ಸಹೃದಯರ ಗಮನ ಸೆಳೆದಿವೆ. ಈ ಸಂಶೋಧನಾ ಗ್ರಂಥಕ್ಕೆ ಮಂಜುನಾಥ್ ಅವರ ಪ್ರತಿಭೆ ಹಾಗೂ ಶ್ರಮದ ಪಾಲು ಅತ್ಯಂತ ದೊಡ್ಡದು ಎಂದು ತಾವು ಭಾವಿಸುವುದಾಗಿ ಹೇಳಿದರು.
ಈ ಕೃತಿಯನ್ನು ಓದುವಾಗ ನನ್ನನ್ನು ಸೆಳೆದ ಎರಡು ಪ್ರಮುಖ ಅಂಶಗಳೆಂದರೆ, ಒಂದು ಮಂಜುನಾಥ್ ಅವರ ಪರಿಶ್ರಮ ಮತ್ತು ಕಾವ್ಯ ಶ್ರದ್ಧೆ, ಮತ್ತೊಂದು ಸತ್ಯವಿಠಲ ಅವರು ಸ್ವತಃ ಶಾಸ್ತ್ರೀಯವಾಗಿ ಸಾಹಿತ್ಯ ಅಧ್ಯಯನ ಮಾಡದಿದ್ದರೂ ಅವರಿಂದಾಗಿರುವ ಕಾವ್ಯ ಸೃಷ್ಟಿ. ಅದರಲ್ಲಿ ನಮ್ಮ ಪ್ರಾಚೀನ ಕವಿಗಳ ಕಾವ್ಯ ಪ್ರಯೋಗಗಳನ್ನು ಮುಂದುವರಿಸಿರುವುದು ಹಾಗೂ ಆ ಸಾತತ್ಯವನ್ನು ಕಾಪಾಡಿಕೊಂಡಿರುವುದು ಅತ್ಯಂತ ಉಲ್ಲೇಖನೀಯ ಅಂಶ ಎಂದರು.
ಈ ಕೃತಿಯಲ್ಲಿ ಮಂಜುನಾಥ್ ಆರಿಸಿಕೊಂಡಿರುವ ಭಾಮಿನಿ ಹಾಗೂ ಲಾವಣಿ ಕಾವ್ಯ ಪ್ರಕಾರಗಳ ವೈಶಿಷ್ಟ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ವಿಮರ್ಶಕರ ದೃಷ್ಟಿಯಿಂದ ಮರೆಯಾಗಿದ್ದ ಸತ್ಯವಿಠಲ ಅವರಂತಹ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ತಮ್ಮ ಸಂಶೋಧನೆಗೆ ಕೈಗೆತ್ತಿಕೊಂಡಿರುವುದು ಅತ್ಯಂತ ಶ್ಲಾಘನೀಯ. ಮಂಜುನಾಥ್ ಕನ್ನಡ ಕಾವ್ಯ ಪರಂಪರೆಯಲ್ಲಿ ಆಗಿರುವ ಎಲ್ಲಾ ರೀತಿಯ ಪ್ರಯೋಗಗಳ ನಡುವೆ ಸತ್ಯವಿಠಲ ಅವರ ಕಾವ್ಯಗಳನ್ನು ಇಟ್ಟು ವಿಮರ್ಶಿಸಿರುವುದು ಅತ್ಯಂತ ವೈಶಿಷ್ಟ್ಯಪೂರ್ಣ ಎಂದರು ಸತ್ಯನಾರಾಯಣ ನುಡಿದರು.
ನಾಡಿನ ಖ್ಯಾತ ಹೋಮಿಯೋಪತಿ ವೈದ್ಯ, ನಾಡೋಜ ಡಾ.ಬಿ.ಟಿ.ರುದ್ರೇಶ್ ತಮ್ಮ ತಂದೆಯ ಬಗ್ಗೆ ಮಾತನಾಡಿ, ಇಂದು ಕುಟುಂಬಗಳಲ್ಲೇ ಸಂಬಂಧಗಳು ಕ್ಷೀಣಿಸುತ್ತಾ ಬರುತ್ತಿವೆ ಎಂದು ಸೋದಾರಣವಾಗಿ ವಿವರಿಸಿ, ಅನೇಕ ಬಾರಿ ತಂದೆ, ಮಗನ ಸಂಬಂಧ ಸಹ ದುರ್ಬಲವಾಗುತ್ತಿದೆ. ತಂದೆ ಇರುವಾಗ ಗಟ್ಟಿಯಾಗಿರದ ಸಂಬಂಧ ಅವರ ಮರಣದ ನಂತರ ಆ ಹಿರಿಯರ ಮಾತುಗಳು ಇಂದು ಪ್ರಸ್ತುತವೆನಿಸುತ್ತದೆ. ನನ್ನ ತಂದೆ ನಾನು ಬೆಂಗಳೂರಿಗೆ ಹೊರಟಾಗ ಹೇಳಿದ್ದು ಮೂರು ಮಾತುಗಳನ್ನು. ನೀನು ಎಲ್ಲಿಗೇ ಹೋಗು, ನಿನ್ನ ಕೈ, ಬಾಯಿ, ಕಚ್ಚೆಯನ್ನು ಶುದ್ಧವಾಗಿಟ್ಟುಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದು. ಅದೀಗ ನಿಜವೆನಿಸುತ್ತ್ತಿದೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ಹಿರಿಯ ಚಿತ್ರನಟಿ ಡಾ.ಗಿರಿಜಾಲೋಕೇಶ್ ಮಾತನಾಡಿ, ತಿಪ್ಪೇಸ್ವಾಮಿಯವರ ವ್ಯಕ್ತಿತ್ವ ಅತ್ಯಂತ ಅನುಕರಣೀಯ. ಪ್ರಸ್ತುತ ಕಾಲಘಟ್ಟದಲ್ಲಿ ಈ ಬಗೆಯ ನಿಷ್ಠುರವಾದಿಗಳನ್ನು ಕಾಣುವುದೇ ಅಪರೂಪ. ಚಿಕ್ಕಮಗಳೂರು ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಅಪರೂಪದ ಪ್ರತಿಭಾವಂತರನ್ನು ಹೊಂದಿರುವುದು ಹೆಮ್ಮೆಯ ವಿಷಯ. ಚಿಕ್ಕಮಗಳೂರು ಹಾಗೂ ತಮಗೂ ಒಂದು ಅವಿನಾಭಾವ ಸಂಬಂಧವಿದೆ. ತೇಜಸ್ವಿಯವರ `ಅಬಚೂರಿನ ಪೋಸ್ಟಾಫೀಸು’ ಚಲನಚಿತ್ರವಾದಾಗ ಅದರಲ್ಲಿ ತಮ್ಮ ನಟನೆಗೆ ರಾಷ್ಟ್ರಪ್ರಶಸ್ತಿ ಬಂದಿರುವುದನ್ನು ನೆನಪಿಸಿಕೊಂಡರು.
ಬಹುಮುಖಿ ಆದರ್ಶ ವ್ಯಕ್ತಿತ್ವದ ತಿಪ್ಪೇಸ್ವಾಮಿ ಕಿರು ಹೊತ್ತಿಗೆಯನ್ನು ನಟ, ನಿರ್ದೇಶಕ ಚಿಂದೋಡಿ ಬಂಗಾರೇಶ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿದರು. ಮಹಾಪ್ರಬಂಧ ಕೃತಿಕಾರ ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳವಾಡಿಯ ಶಿಕ್ಷಕಿ ರೂಪ ಮತ್ತು ಪತ್ರಿಕಾ ಛಾಯಾಗ್ರಾಹಕ ತಾರಾನಾಥ್ ಕಾಮತ್ ಮಾತನಾಡಿದರು.
ನೃತ್ಯ ಕಲಾವಿದೆ ವಿದುಷಿ ಡಾ.ವಿದ್ಯಾಲಕ್ಷ್ಮೀ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್, ಮಾಡೆಲ್ ಇಂಗ್ಲೀಷ್ ಶಾಲೆಯ ಎಂ.ಎನ್.ಷಡಕ್ಷರಿ ಅವರನ್ನು ಸನ್ಮಾನಿಸಲಾಯಿತು. ಇಂಜಿನಿಯರ್ ಬಿ.ಟಿ.ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು. ವಾಸಂತಿ ಪದ್ಮನಾಭ ನಿರೂಪಿಸಿದರು.