ಚಿಕ್ಕಮಗಳೂರು: ಮಲೆನಾಡು ಗಿಡ್ಡ ಹಸುಗಳು ಸಂರಕ್ಷಣೆಗೆ ಶಾಶ್ವತ ಗೋಮಾಳ ಮೀಸಲಿಡಲು ಪಶುಸಂಗೋಪನಾ ಇಲಾಖೆ ಮುಂದಾಗಿರುವುದನ್ನು ಕೊಪ್ಪ ತಾಲ್ಲೂಕು ಹೇರೂರು ಕೆಮ್ಮಣ್ಣು ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಸ್ವಾಗತಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕಳಸಾ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಖ್ಯಾತನಮಕ್ಕಿ ಹುಲ್ಲುಗಾವಲು ಪ್ರದೇಶವನ್ನು ಮಲೆನಾಡು ಗಿಡ್ಡು ಹಸುಗಳ ಸಂರಕ್ಷಣೆಗೆ ಶಾಶ್ವತ ಗೋಮಾಳವನ್ನಾಗಿ ಮೀಸಲಿಡುವ ಜೊತೆಗೆ ಕ್ಷೀಣಿಸುವ ಹಂತದಲ್ಲಿರುವ ಗಿಡ್ಡ ಗೋತಳಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕೆಂದು ಒತ್ತಾಯಿಸಿದರು.
ಈ ಕಾರ್ಯಕ್ಕೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತದ ವಿಶೇಷ ಪ್ರಯತ್ನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದೇಶದ ವಿಶಿಷ್ಟ ಗೋ ಸಂತತಿ ಮಲೆನಾಡು ಗಿಡ್ಡಗಳು ಕೇವಲ ಪಶ್ಚಿಮ ಘಟ್ಟ ಪ್ರದೇಶಗಳ ಹವಾಮಾನಕ್ಕೆ ಗಾಳಿ, ಚಳಿ, ಬಿಸಿಲಿಗೆ ಹೊಂದಿಕೊಂಡು ಬದುಕುವಂತಹವುಗಳಾಗಿದ್ದು, ಪ್ರಸ್ತುತ ಈ ತಳಿ ಮಾನ್ಯತೆಯೊಂದಿಗೆ ವಿಶಿಷ್ಟ ತಳಿಯ ಸಾಲಿನಲ್ಲಿದ್ದು, ಪಶ್ಚಿಮ ಘಟ್ಟಗಳ ಅತೀ ಹೆಚ್ಚು ಮಳೆ ಬೀಳುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಜಿಲ್ಲೆಯ ಕೆಲವು ಭಾಗ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಕಾರವಾರ ವ್ಯಾಪ್ತಿಯಲ್ಲಿ ಈ ತಳಿ ಇದ್ದು, ೧೫ ರಿಂದ ೨೫ ವರ್ಷದವರೆಗೂ ಗಟ್ಟಿಯಾಗಿ ಬದುಕಬಲ್ಲದು ಎಂದು ವಿವರಿಸಿದ್ದಾರೆ.
ಮಲೆನಾಡಿನಲ್ಲಿ ಹಿಂದೆ ಕೊಟ್ಟಿಗೆಯಲ್ಲಿ ಹಸು ಇದ್ದರೆ ಶ್ರೀಮಂತ ಎಂದು ಕರೆಯಲಾಗುತ್ತಿತ್ತು. ಕೃಷಿ ಜಮೀನು ಹೊಂದಿರುವ ರೈತ ಈ ಮಲೆನಾಡು ಗಿಡ್ಡಗಳಿಲ್ಲದೆ ಕೃಷಿ ಚಟುವಟಿಕೆ ನಡೆಸಲಾಗುವುದಿಲ್ಲ ಎಂದು ಹೇಳಿದರು.
ನೂರಾರು ಎಕರೆ ಗೋಮಾಳವನ್ನು ಮಲೆನಾಡು ಗಿಡ್ಡಗಳ ಮೇವಿಗಾಗಿಯೇ ಮೀಸಲಿದ್ದು, ಪ್ರಸ್ತುತ ಈ ಎಲ್ಲಾ ಪ್ರದೇಶ ಬಲಾಢ್ಯರ ಪಾಲಾಗಿರುವುದರಿಂದ ಮೇಯಲು ಜಾಗವಿಲ್ಲದೆ ಹಸಿವಿನಿಂದ ತತ್ತರಿಸಿ ಪ್ರಾಣ ಬಿಡುತ್ತಿವೆ. ಜೊತೆಗೆ ಮಾಂಸ ಮಾಫಿಯಾದ ಪಾಲಾಗುತ್ತಿವೆ ಎಂದು ತಿಳಿಸಿದರು.
ಕಂಪನಿ ಎಸ್ಟೇಟ್ಗಳು ಹಾಗೂ ಮಾಲೀಕರ ಮಿತಿ ಮೀರಿದ ಕ್ರೌರ್ಯ ಕಾರ್ಮಿಕರ ರೂಪದಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ವಲಸೆ ರೋಹಿಂಗ್ಯಾಗಳ ಕ್ರೌರ್ಯಕ್ಕೆ ಅಳಿದುಳಿದ ಗೋವುಗಳು ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಗೋಮಾಳ ಸಂರಕ್ಷಿಸುವ ಮೂಲಕ ಗಿಡ್ಡ ತಳಿ ಗೋವುಗಳನ್ನು ಉಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
Demand for protection of Malnad short-horned cows