ಚಿಕ್ಕಮಗಳೂರು: ಬಸವತತ್ವದ ಪ್ರಚಾರವನ್ನೇ ಮುಖ್ಯ ಆಶಯದೊಂದಿಗೆ ನಗರದಲ್ಲಿ ಆರಂಭಗೊಂಡ ಶ್ರೀ ಬಸವತತ್ವ ಪೀಠ ಈಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಕಲ್ಯಾಣ ನಗರದ ಬಸವ ಮಂದಿರದಲ್ಲಿ ಸುಮಾರು ೩.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಸವತತ್ವ ಸಮಾವೇಶ ಫೆ.೨೮ ಹಾಗೂ ಮಾ.೧ ರಂದು ನಡೆಯಲಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಈ ವಿಷಯ ತಿಳಿಸಿ, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ ಮಹಾ ಸ್ವಾಮಿಗಳ ೧೭೦ ನೇ ಜಯಂತಿ ಮತ್ತು ಜಯಚಂದ್ರಶೇಖರ ಮಹಾಸ್ವಾಮಿಗಳ ೨೯ನೇ ಸಂಸ್ಮರಣೆ ಕಾರ್ಯಕ್ರಮ ಜರುಗಲಿದೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಫೆ.೨೮ ರಂದು ಸಂಜೆ ೬ ಗಂಟೆಗೆ ಬಸವತತ್ವ ಸಮಾವೇಶ ಶಿವಾನುಭವಗೋಷ್ಠಿ-೪೩ ನಡೆಯಲಿದ್ದು, ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನು ಅಭಿನಂದಿಸಲಾಗುವುದು ಎಂದರು.
ಕಡೂರು ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ದೇಶಿಕೇಂದ್ರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಜಡೆ ಸಂಸ್ಥಾನ ಮಠದ ಗುರುಮಟ್ಕಲ್ನ ಖಾಸಾ ಮಠ, ಶಂಕರದೇವರ ಮಠ, ಕೋಡಿಹಳ್ಳಿ ಭೃಗೀಶ್ವರ ಮಠ, ಹಾಸ ಮುಕಂದೂರು ಮಠ, ಸಿಂದಿಗೆರೆ ಕರಡಿಗವಿ ಮಠ, ಅಥಣಿಯ ಗಚ್ಚಿನ ಮಠದ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಡಾ. ಜಯರಾಜಶೇಖರ್ರವರ ಗಮಕ ರೂಪಕಗಳು ಎಂಬ ಪುಸ್ತಕವನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಿಡುಗಡೆ ಮಾಡುವರು. ದಾಕ್ಷಾಯಣಿ ಜಯದೇವಪ್ಪ ಅವರ ದಾಕ್ಷಾಯಣಿ ವಚನಗಳು ಕೃತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಿಡುಗಡೆ ಮಾಡುವರು. ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ, ಕಾರ್ಗಿಲ್ ಯೋಧ ನವೀನ್ ನಾಗಪ್ಪ, ಐಕ್ಯಾಟ್ ಸಂಸ್ಥಾಪಕಿ ಡಾ. ಶಾಲಿನಿ ನಲೋಡ ಇವರುಗಳನ್ನು ಸನ್ಮಾನಿಸಲಾಗುವುದೆಂದರು.
ಮುಖ್ಯ ಅತಿಥಿಗಳಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಡಿ.ಎಸ್. ಸುರೇಶ್, ಎಂ.ಕೆ. ಪ್ರಾಣೇಶ್, ಎಸ್. ರುದ್ರೇಗೌಡ, ಗಾಯಿತ್ರಿ ಶಾಂತೇಗೌಡ, ಮತ್ತಿತರರು ಪಾಲ್ಗೊಳ್ಳುವರು ಎಂದು ಹೇಳಿದರು. ಮಾ.೧ ರಂದು ಬೆಳಗ್ಗೆ ೧೦ ಗಂಟೆಗೆ ಮಠದ ನೂತನ ಕಟ್ಟಡ ಉದ್ಘಾಟನೆಯನ್ನು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ೧೧೦೮ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ವಹಿಸಲಿದ್ದಾರೆ ಎಂದರು.
ಇದೇ ದಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಯವರ ಅಲ್ಲಮ ಪ್ರಭುದೇವರ ಕುರಿತ ಉಪನ್ಯಾಸಗಳ ಸಂಗ್ರಹ ಕೃತಿ ಬಿಡುಗಡೆ ಮಾಡುವರು. ಅಲ್ಲಮ ಅನುಸಂಧಾನ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡುವರು. ಐಸಿರಿ ಪತ್ರಿಕೆ ಸಂಪಾದಕ ರೋಹನ್ ಭಾರ್ಗವಪುರಿ ಅವರ ಲತೆಯ ರೋಹಣ ಕೃತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಬಿಡುಗಡೆ ಮಾಡಲಿದ್ದು, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡುವರು ಎಂದು ಹೇಳಿದರು.
ಶಾಸಕರು ಹಾಗೂ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರೂ ಆದ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ನಯನ ಮೋಟಮ್ಮ, ಎಸ್.ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಫೆ.೨೮ ರಂದು ಬೆಳಗ್ಗೆ ೮.೩೦ ಕ್ಕೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಇಬ್ಬರು ಶ್ರೀಗಳ ಉತ್ಸವ ಮೆರವಣಿಗೆ ಆದಿಚುಂಚನಗಿರಿ ವೃತ್ತದಿಂದ ಆರಂಭಗೊಂಡು ಬಸವೇಶ್ವರ ರಸ್ತೆಯ ಮೂಲಕ ಮಠವನ್ನು ತಲುಪಲಿದೆ. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಮಠದ ಸದ್ಭಕ್ತರು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಮಠದ ಇತಿಹಾಸ
೧೯೭೬ ರಲ್ಲಿ ಶ್ರೀ ಜಯಚಂದ್ರ ಶೇಖರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಬಸವತತ್ವ ಪೀಠವು ೨೦೨೬ ಕ್ಕೆ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮಠದ ಪೀಠಾಧ್ಯಕ್ಷರಾದ ಡಾ. ಬಸವಮರುಳಸಿದ್ದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ನೆಲೆಯಾಗ ಪೀಠ ರೂಪುಗೊಂಡಿದೆ. ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಬಸವತತ್ವ ಅಭಿಮಾನಿಗಳ ಶ್ರದ್ಧಾಕೇಂದ್ರವಾಗಿದೆ. ಬಸವಾಭಿಮಾನಿಗಳ ಆಶಯದಂತೆ ಸುಸಜ್ಜಿತ ಬಸವಮಂದಿರ ನಿರ್ಮಾಣವಾಗಿದ್ದು, ಎಲ್ಲರ ತನು-ಮನ-ಧನದ ಸಹಾಯದೊಂದಿಗೆ ಮುಂದಿನ ದಿನಗಳಲ್ಲಿ ಈ ಮಂದಿರ ನಾಡಿನಲ್ಲಿ ಬಸವತತ್ವ ಹಾಗೂ ಶರಣ ಚಳುವಳಿಯ ಆಶಯವನ್ನು ಮುಂದುವರೆಸಿಕೊಂಡು ಹೋಗುವ ಗುರಿ ಹೊಂದಿದ್ದು ಧಾರ್ಮಿಕ ಚಟುವಟಿಕೆಗಳಿಗೆ ಪೂರಕವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳ ನೆಲೆಯಾಗುವ ಉದ್ದೇಶ ಹೊಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ, ವಿವಿಧ ಪಕ್ಷಗಳ ಮುಖಂಡರಾದ ಎಂ.ಎಸ್. ನಿರಂಜನ್, ಹೆಚ್.ಸಿ. ಕಲ್ಮರುಡಪ್ಪ, ಸೊಮಶೇಖರ್, ಮಹಡಿಮನೆ ಸತೀಶ್, ಚಿದಾನಂದ್, ಸದಾಶಿವ, ಜಗದೀಶ್ ಬಾಬು ಹಾಗೂ ಟ್ರಸ್ಟಿ ಬಿ. ತಿಪ್ಪೇರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
Feb. 28-Mar. 1 Basavatatva Convention inauguration of new building