ಚಿಕ್ಕಮಗಳೂರು: 2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯವನ್ನು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫೆ. 28ರಂದು ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಕಾಲೇಜಿನ ನೂತನ ಕಟ್ಟಡದಲ್ಲಿ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆಯೇ ಮರು ಮತ ಎಣಿಕೆ ನಡೆಯಲಿದೆ. 2021 ರಲ್ಲಿ ನಡೆದ ಚುನಾವಣೆಯ ಮತಯಂತ್ರಗಳನ್ನು ಬಾಕ್ಸ್ ನಲ್ಲಿ ಹಾಕಿ ಟ್ರೆಸರಿಯಲ್ಲಿ ಇರಿಸಲಾಗಿದೆ. ಫೆ. 28ರಂದು ಬೆಳಗ್ಗೆ 6:30ಕ್ಕೆ ಟ್ರಸರಿಯಿಂದ ಮತಯಂತ್ರಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಥವಾ ಏಜೆಂಟ್ಗಳ ಸಮ್ಮುಖದಲ್ಲಿ ಮರುಮತ ಎಣಿಕೆ ಕೇಂದ್ರಕ್ಕೆ ಬಿಗಿಬಂದೋಬಸ್ ನಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.
ಮತ ಎಣಿಕೆಗೆ ಮೂರು ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಟೇಬಲ್ ಗಳಲ್ಲಿ ಮತ ಎಣಿಕೆ ನಡೆದರೆ ಇನ್ನೊಂದು ಟೇಬಲ್ ರಿಟರ್ನಿಂಗ್ ಆಫೀಸರ್ ನಿರ್ವಹಿಸಲಿದ್ದಾರೆ. ಜಿಲ್ಲೆಯ ಇಬ್ಬರು ಎಸಿಗಳನ್ನು ಸೂಪರ್ವೈಸರ್ಗಳನ್ನಾಗಿ ಹಾಗೂ ಇಬ್ಬರು ತಹಸೀಲ್ದಾರ್ಗಳನ್ನು ಅವರಿಗೆ ಸಹಾಯಕರನ್ನಾಗಿ ನೇಮಿಸಲಾಗಿದೆ ಎಂದರು.
ಇನ್ನು ಮರುಮತ ಎಣಿಕೆಯನ್ನು ಸೂಕ್ಷ್ಮವಾಗಿ ನಿರ್ವಹಿಸುವ ಉದ್ದೇಶದಿಂದ ಚುನಾವಣಾ ಆಯೋಗ ಮೈಕ್ರೋ ಅಬ್ಸರ್ವರ್ ರನ್ನಾಗಿ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ನೇಮಿಸಿದೆ. ಉಜ್ವಲ್ ಕುಮಾರ್ ಘೋಷ್ ಅವರು ಬುಧವಾರವೇ ಚಿಕ್ಕಮಗಳೂರಿಗೆ ಆಗಮಿಸಿ ಎಲ್ಲಾ ಸಿದ್ಧತೆ ಗಮನಿಸುವ ಜೊತೆಗೆ ಅಗತ್ಯ ಮಾಹಿತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಪರಿಷತ್ ಚುನಾವಣೆಯ ಮರುಮತ ಎಣಿಕೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ 3 ಕ್ಯಾಮರಾ ಗಳನ್ನು ಅಳವಡಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಮೀನಾ ನಾಗರಾಜ್ ತಿಳಿಸಿದರು.
ಮರುಮತ ಎಣಿಕೆ ಕೊಠಡಿಯಲ್ಲಿ ಎರಡು ಸ್ಟ್ಯಾಂಡಿಂಗ್ ಕ್ಯಾಮರಾ ಹಾಗೂ ಒಂದು ಮೂವಿ ಕ್ಯಾಮೆರಾ ಮೂಲಕ ಇಡೀ ಮರು ಮತ ಎಣಿಕೆ ಪ್ರಕ್ರಿಯೆಯನ್ನು ರೆಕಾರ್ಡ್ ಮಾಡಲಾಗುವುದು. ಬಳಿಕ ರೆಕಾರ್ಡಿಂಗ್ ಅನ್ನು ಸೀಲ್ಡ್ ಕವರಿನಲ್ಲಿ ಚುನಾವಣಾ ಆಯೋಗದ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳಿಗೆ ಸಲ್ಲಿಕೆ ಮಾಡಲಾಗುವುದು ಎಂದು ವಿವರಿಸಿದರು.
ಗುರುವಾರ ಪರಿಷತ್ ಚುನಾವಣೆಯ ಮರುಮತ ಎಣಿಕೆ ನಡೆಯಲಿದ್ದು ಮರುಮತ ಎಣಿಕೆಯ ಸಂಪೂರ್ಣ ವಿವರವನ್ನು ಹಾಗೂ ಮತ ಎಣಿಕೆಯ ವಿಡಿಯೋ ಚಿತ್ರೀಕರಣವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗದ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಿಗೆ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.
ಗುರುವಾರ ಮತ ಎಣಿಕೆ ನಡೆದರೂ ಫಲಿತಾಂಶ ಪ್ರಕರಣ ಮಾಡುವಂತಿಲ್ಲ. ಹೀಗಾಗಿ ನ್ಯಾಯಾಲಯಗಳ ಆದೇಶದಂತೆ ನ್ಯಾಯಾಲಯಗಳಿಗೆ ಮುಚ್ಚಿದ ಲಕೋಟೆಯಲ್ಲಿ ಸಂಪೂರ್ಣ ವಿವರ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.
ಗುರುವಾರ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ಪರಿಷತ್ ಚುನಾವಣೆಯ ಮರುಮತ ಎಣಿಕೆ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಕಾಲೇಜು ಆವರಣದಲ್ಲಿ ಹಾಗೂ ನಗರಾಧ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಎಸ್ ಪಿ ಡಾ.ವಿಕ್ರಮ ಅಮಟೆ ತಿಳಿಸಿದರು.
ಐ ಡಿ ಎಸ್ ಜಿ ಕಾಲೇಜಿನ ಆವರಣದಲ್ಲಿ ನಾಲ್ಕು ಕೆ ಎಸ್ ಆರ್ ಪಿ ತುಕಡಿಗಳು ಹಾಗೂ 300 ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗುವುದು. ಇದಲ್ಲದೆ ನಗರಾಧ್ಯಂತವೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಇದಲ್ಲದೆ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮರುಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಐಡಿ ಕಾರ್ಡ್ ಇದ್ದ ಸಿಬ್ಬಂದಿ, ಚುನಾವಣಾ ಅಭ್ಯರ್ಥಿಗಳು ಹಾಗೂ ಗುರುತಿನ ಪತ್ರ ಹೊಂದಿರುವ ಕೌಂಟಿಂಗ್ ಏಜೆಂಟ್ ಗಳನ್ನು ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಬಿಡಲಾಗುವುದು. ಉಳಿದಂತೆ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
Legislative election vote recount today