ಚಿಕ್ಕಮಗಳೂರು: ನಿರುದ್ಯೋಗಿಗಳ ಜೀವನೋಪಾಯಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಸಂಕಲ್ಪ ಯೋಜನೆಯಡಿ ಜಿಲ್ಲಾಮಟ್ಟದ ಕೌಶಲ್ಯ ರೋಜ್ಗಾರ್ ಉದ್ಯೋಗ ಮೇಳ-೨೦೨೫ ನ್ನು ಮಾ.೨ ರಂದು ಭಾನುವಾರ ಬೆಳಗ್ಗೆ ೯.೩೦ ರಿಂದ ೪.೩೦ ರವರೆಗೆ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್ ಹೆಚ್.ಸಿ ಅವರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಉದ್ಯೋಗದಾತ ಫೌಡೇಷನ್, ಐಡಿಎಸ್ಜಿ ಸರ್ಕಾರಿ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಈ ಉದ್ಯೋಗ ಮೇಳದಲ್ಲಿ ವಿವಿಧ ವಲಯಗಳ ಮಾಹಿತಿ ಮತ್ತು ತಂತ್ರಜ್ಞಾನ, ಉತ್ಪಾದನಾ ವಲಯ, ಸೇವಾವಲಯ, ಪ್ರವಾಸೋದ್ಯಮ ಸೇರಿದಂತೆ ಇತ್ಯಾದಿ ವಲಯಗಳಿಂದ ಸುಮಾರು ೭೦ ರಿಂದ ೭೫ ಉದ್ಯೋಗದಾತ ಕಂಪನಿಗಳು ಭಾಗವಹಿಸುತ್ತಿವೆ. ಸುಮಾರು ೧೧ ಸಾವಿರ ಹುದ್ದೆಗಳಿಗೆ ಬೇಡಿಕೆ ಇರುವುದಾಗಿ ಈ ಕಂಪನಿಗಳು ಮಾಹಿತಿ ನೀಡಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೩೯೦೦ ಕ್ಕೂ ಹೆಚ್ಚು ಡಿಪ್ಲೊಮೊ ಹಾಗೂ ಪದವೀಧರ ಯುವ ಫಲಾನುಭವಿಗಳು ಉದ್ಯೋಗಾಕಾಂಕ್ಷಿಗಳಾಗಿದ್ದು, ಅವರೊಂದಿಗೆ ೭ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಉದ್ಯೋಗದ ನಿರೀಕ್ಷೆಯಲ್ಲಿದ್ದು, ಅವರುಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರದ ಆದೇಶದಂತೆ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಎಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗ ಮೇಳದ ಬಗ್ಗೆ ಪ್ರಚಾರ ಕೈಗೊಂಡು ಆನ್ಲೈನ್ ಮೂಲಕ ೧೫೦೦ ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೊಂದಣಿಯಾಗಿದ್ದು, ನೊಂದಣಿ ಮಾಡದಿರುವವರೂ ಸಹ ಈ ಮೇಳದಲ್ಲಿ ಭಾಗವಹಿಸಲು ಅವಕಾಶವಿದ್ದು, ಈ ಸಂಬಂಧ ಗ್ರಾ.ಪಂ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚುರಪಡಿಸಲಾಗಿದ್ದು, ಒಂದು ಪಂಚಾಯಿತಿಯಿಂದ ಕನಿಷ್ಟ ೫೦ ಜನರನ್ನು ಕರೆತರಲು ಸೂಚಿಸಲಾಗಿದೆ ಎಂದರು.
ಈ ಉದ್ಯೋಗ ಮೇಳದಲ್ಲಿ ನೇರ ಸಂದರ್ಶನ ಮೂಲಕ ಆಯ್ಕೆಮಾಡಿಕೊಳ್ಳಲಾಗುವುದು. ತಮ್ಮ ವಯಕ್ತಿಕ ವಿವರ ಹಾಗೂ ಇನ್ನಿತರ ದಾಖಲೆಗಳೊಂದಿಗೆ ಭಾಗವಹಿಸುವಂತೆ ವಿನಂತಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬೇಕೆಂದು ಹೇಳಿದರು.ಹೆಚ್ಚಿನ ಮಾಹಿತಿಗೆ ಹಾಗೂ ನೊಂದಾವಣೆಗೆ http://forms.gle/Ast7zzfc59bHuJHB6 ಸಂಪರ್ಕಿಸುವಂತೆ ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ ಸುಮಾರು ೫ ಸಾವಿರ ನಿರುದ್ಯೋಗಿ ಯುವಕರು ಭಾಗವಹಿಸುವ ನಿರೀಕ್ಷೆ ಇದ್ದು, ಕನಿಷ್ಟ ೨ ಸಾವಿರ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.
ಸಂಘದ ವತಿಯಿಂದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯುವಜನತೆಗೆ ಆರೋಗ್ಯ ಇಲಾಖೆಯಿಂದ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ರಕ್ತದಾನ ಶಿಬಿರ, ವಿವಿಧ ಇಲಾಖೆಗಳಲ್ಲಿ ದೊರೆಯುವ ಯೋಜನೆಗಳ ಬಗ್ಗೆ ಪ್ರಚಾರಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ರುಕ್ಮಾಂಗದ, ರಾಜೇಶ್, ಶಿವಲಿಂಗಯ್ಯ, ರಾಜೇಂದ್ರ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Huge job fair at IDSG College on March 2