ಚಿಕ್ಕಮಗಳೂರು: -ಒಳಚರಂಡಿ ಮತ್ತು ಅಮೃತ್ ಯೋಜನೆಯಿಂದ ಹಾನಿಗೊಳಗಾಗಿರುವ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಎಸ್ಎಫ್ಸಿ ಅನುದಾನದಲ್ಲಿ ೧೦ ಕೋಟಿ ರೂ ಬಿಡುಗಡೆ ಮಾಡಿದ್ದಾರೆಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚಿಕ್ಕಮಗಳೂರು ನಗರ ಪ್ರವಾಸಿ ತಾಣಗಳ ಕೇಂದ್ರವಾಗಿದ್ದು, ಪಕ್ಷಾತೀತವಾಗಿ ನಗರಸಭೆಯ ಎಲ್ಲಾ ವಾರ್ಡ್ಗಳ ರಸ್ತೆಗಳ ಅಭಿವೃದ್ಧಿಗೆ ಈ ಅನುದಾನವನ್ನು ಬಳಸಿ ನಗರದ ಸರ್ವತೋಮುಖ ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ಮೊದಲ ಆದ್ಯತೆಯಾಗಿ ನಗರದ ಕೆಲವು ಪ್ರಮುಖ ರಸ್ತೆಗಳನ್ನು ಆಯ್ಕೆಮಾಡಿಕೊಂಡು ವಾರ್ಡಿನ ಸದಸ್ಯರು ಪಕ್ಷ ನೋಡದೆ ಅವಶ್ಯಕತೆ ಇರುವಲ್ಲಿ ಮೊದಲ ಆದ್ಯತೆ ನೀಡಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಹೆಚ್ಚು ಜನರ ಓಡಾಟ, ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳಿಗೆ ಮೊದಲ ಆದ್ಯತೆ ಮೇರೆಗೆ ತೆಗೆದುಕೊಂಡು ಕ್ರಿಯಾಶೀಲ ಯೋಜನೆ ತಯಾರಿಸಿ ಅತೀ ಶೀಘ್ರವಾಗಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.
ಮುಂದಿನ ೩ ತಿಂಗಳು ಅಂದರೆ ಮಾಚ್, ಏಪ್ರಿಲ್, ಮೇ ಈ ಮಾಹೆಯ ಒಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಮುಗಿಸಲು ಕಾಲಾವಕಾಶ ಬೇಕು. ಮಳೆಗಾಲ ಆರಂಭವಾಗುವುದರ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಸಾರ್ಥಕವಾಗುತ್ತದೆ ಎಂದರು.
ನಗರದ ಪ್ರಮುಖ ರಸ್ತೆಗಳೆಂದರೆ ಬಸವನಹಳ್ಳಿ ಮುಖ್ಯರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಒಕ್ಕಲಿಗರ ಭವನಕ್ಕೆ ಹೋಗುವ ರಸ್ತೆ, ಆಂಜನೇಯ ದೇವಸ್ಥಾನದ ರಸ್ತೆ, ಬಾರ್ಲೈನ್ ರಸ್ತೆ, ಶರೀಫ್ಗಲ್ಲಿ, ಟೆಂಡರ್ ಚಿಕನ್ನಿಂದ ಮಾರ್ಕೇಟ್ ರಸ್ತೆಗೆ ಸಂಪರ್ಕಿಸುವ ರಸ್ತೆ, ಹೌಸಿಂಗ್ ಬೋರ್ಡ್ನ ಹೆಚ್ಐಜಿ ೩ನೇ ಹಂತದ ೬೦ ಅಡಿ ರಸ್ತೆ, ಕೋಟೆ ಸುಗ್ಗಿಕಲ್ ರಸ್ತೆ, ಉಂಡೇದಾಸರಹಳ್ಳಿ ಮುಂತಾದ ರಸ್ತೆಗಳ ಅಭಿವೃದ್ಧಿಗೆ ತುರ್ತುಕ್ರಮ ವಹಿಸುವಂತೆ ಸೂಚಿಸಿದರು.
ನಗರದಲ್ಲಿ ಆದ್ಯತೆ ಮೇರೆಗೆ ೧೫ನೇ ಹಣಕಾಸು ಯೋಜನೆಯ ಅನುದಾನವನ್ನು ವಿದ್ಯುತ್ ಬೀದಿದೀಪ ಅಳವಡಿಕೆಗೆ ಬಳಸಲಾಗಿದೆ. ಮುಂದೆ ಬಿಡುಗಡೆಯಾಗುವ ಅನುದಾನದಲ್ಲಿ ಬೇಲೂರು ರಸ್ತೆ ಬಸ್ ತಂಗುದಾಣದಿಂದ ಹಿರೇಮಗಳೂರು ವರೆಗೆ ಹಾಗೂ ಟೌನ್ ಕ್ಯಾಂಟೀನ್ನಿಂದ ಮೌಂಟೇನ್ ವ್ಯೂ ಶಾಲೆವರೆಗೆ ಹಂತಹಂತವಾಗಿ ಬೀದಿದೀಪಗಳನ್ನು ಅಳವಡಿಸಲಾಗುವುದೆಂದು ಹೇಳಿದರು.
೨೦೧೨ ರಲ್ಲಿ ಆರಂಭಗೊಂಡ ಯುಜಿಡಿ ಕಾಮಗಾರಿ ೨೦೨೫ ಆದರೂ ಪೂರ್ಣವಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರು ಟೆಂಡರ್ ಕರೆದು ಕಾಮಗಾರಿಗೆ ಆದೇಶ ನೀಡುವಂತೆ ಸಲಹೆ ನೀಡಿದರು.
ಅಮೃತ್ ಯೋಜನೆ ಸಹ ಪೂರ್ಣಗೊಂಡಿಲ್ಲ. ನೂತನವಾಗಿ ಜಾಕ್ವೆಲ್ ಪ್ರಾರಂಭಿಸಿ ಮೋಟಾರ್ ಅಳವಡಿಸಲು ನಿರ್ಧರಿಸಲು ನಿರ್ಧರಿಸಿದ್ದು, ಯಗಚಿ ಜಲಾಶಯದಿಂದ ನಗರಕ್ಕೆ ನೀರೊದಗಿಸುವ ಕಾರ್ಯದಲ್ಲಿ ಪರ್ಯಾಯ ಮೋಟಾರ್ ಇಡಬೇಕೆಂಬ ಸಾಮಾನ್ಯ ಜ್ಞಾನ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗೆ ಇಲ್ಲದಿರುವುದು ದುರದೃಷ್ಟಕರ ಎಂದು ಹೇಳಿದರು.
ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಗರಸಭೆಯ ೩೫ ವಾರ್ಡ್ಗಳ ಅಭಿವೃದ್ಧಿಗೆ ಶಾಸಕರು ಸರ್ಕಾರದಿಂದ ೧೦ ಕೋಟಿ ರೂ ಅನುದಾನ ತಂದಿರುವುದಕ್ಕೆ ಅಭಿನಂದಿಸಿದರು.
ಪ್ರವಾಸಿ ತಾಣಗಳ ಕೇಂದ್ರವಾಗಿರುವ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ, ಇದರಿಂದ ನಗರವನ್ನು ಸುಂದರವಾಗಿಸುವ ಗುರಿ ಹೊಂದಲಾಗಿದ್ದು, ನಗರಸಭೆ ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸಿ ಸ್ವಚ್ಚ ನಗರ, ಸುಂದರ ನಗರವನ್ನಾಗಿಸಲು ನಿರ್ಧರಿಸಲಾಗಿದೆ ಎಂದರು.
ಸರ್ಕಾರ ಬಿ ಖಾತೆಗೆ ಅನುಮೋದನೆ ನೀಡಿರುವುದರಿಂದ ಇದರಿಂದ ಬರುವ ಹಣದಲ್ಲಿ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಿ ಆಟದ ವಸ್ತುಗಳನ್ನು ಅಳವಡಿಸಿ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಘೋಷಣೆಯೊಂದಿಗೆ ನಗರಸಭೆ ಕೆಲಸಕಾರ್ಯಗಳಿಗೆ ಮುಂದಾಗಿದೆ ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಪೌರಾಯುಕ್ತ ಬಿ.ಸಿ. ಬಸವರಾಜು ಉಪಸ್ಥಿತರಿದ್ದರು.
General meeting held at the municipal council