ಚಿಕ್ಕಮಗಳೂರು: ಸುದ್ದಿ ರಾಜು ಪ್ರಕಾಶನ ಮತ್ತು ಚಿಕ್ಕಮಗಳೂರು ಶರಣ ಸಾಹಿತ್ಯ ಪರಿಷತ್ ನಿಂದ ಮಾ. 11ರಂದು ಸಂಜೆ 5ಗಂಟೆಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಗೊ.ರು.ಚನ್ನಬಸಪ್ಪ ಅವರ ಹೊನ್ನ ಬಿತ್ತೇವು ಹೊಲಕೆಲ್ಲ ಗ್ರಂಥದ ಮೂರನೇ ಆವೃತ್ತಿ ಬಿಡುಗಡೆ ಹಾಗೂ ಸಾಧಕರಿಗೆ ಸದಾಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುದ್ದಿರಾಜು ಪ್ರಕಾಶನದ ಮುಖ್ಯಸ್ಥ ಎನ್.ರಾಜು ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1967 ರಲ್ಲಿ ನಡೆದ ಪ್ರಥಮ ರಾಜ್ಯ ಜಾನಪದ ಸಮ್ಮೇಳನದ ಸ್ಮರಣ ಗ್ರಂಥವಾಗಿದ್ದ ಹೊನ್ನ ಬಿತ್ತೇವು ಹೊಲಕೆಲ್ಲ ಗ್ರಂಥದ ಮೂರನೇ ಆವೃತ್ತಿ ಇದೀಗ ಬಿಡುಗಡೆಯಾಗುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ಹಾಗೂ ಸ್ಮರಣ ಗ್ರಂಥವನ್ನು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶ ಕೇಂದ್ರ ಸ್ವಾಮೀಜಿ ಬಿಡುಗಡೆಗೊಳಿಸಲಿದ್ದಾರೆ. ಇದೆ ಸಂದರ್ಭದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಗೊ.ರು.ಚ ಅವರ ಕುರಿತು ಜಾನಪದ ಸಾಹಿತಿ ಬಸವರಾಜ ನೆಲ್ಲಿಸರ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಪಂದನ ಆಸ್ಪತ್ರೆ ವೈದ್ಯ ಡಾ. ಸಂತೋಷ್ ನೆಹ್ತಾ, ವಕೀಲ ಎಸ್.ಎನ್.ಮಲ್ಲೇಗೌಡ, ಪತ್ರಕರ್ತ ಅಶೋಕ್ ಕುಮಾರ್, ಅಂಕಣಕಾರ ಬಿ.ಚಂದ್ರೇಗೌಡ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಜನಾರ್ಧನ, ಜನಪರ ಹೋರಾಟಗಾರರಾದ ರಾಧ ಸುಂದರೇಶ್, ಜಾನಪದ ಕಲಾವಿದೆ ಲಕ್ಷ್ಮೀದೇವಮ್ಮ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದೆ ಭಾಗಮ್ಮ, ಸಾಹಿತಿ ಕು.ಸ.ಮಧುಸೂದನ್, ಪತ್ರಕರ್ತರಾದ ಕಂ.ಕ.ಮೂರ್ತಿ, ಉದಯ್ ಕುಮಾರ್, ರೈತ ಹೋರಾಟಗಾರ ಕೆ.ಕೆ.ಕೃಷ್ಣೇಗೌಡ, ಕ್ರೀಡಾ ತರಬೇತುದಾರ ಐ.ಫ್ರಾನ್ಸಿಸ್ ಅವರಿಗೆ ಸದಾಭಿನಂದನೆ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬರಹಗಾರ ಬಿ.ಎಮ್. ಮಂಜುನಾಥ್ಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್, ರೈತ ಮುಖಂಡ ಗುರುಶಾಂತಪ್ಪ, ಡಿಎಸ್ಎಸ್ ಮುಖಂಡ ಮರ್ಲೆ ಅಣ್ಣಯ್ಯ ಉಪಸ್ಥಿತರಿದ್ದರು
Honna Bittevu Holakella 3rd edition to be released on March 11th