ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಜಾಗಕ್ಕೆ ನೆಲ್ಲೂರು ಮಠದ ಮನೆ ಮತ್ತು ಜಾಮಿಯಾ ಮಸೀದಿ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾಗದ ವಿಚಾರವಾಗಿ ಜಾಮಿಯಾ ಮಸೀದಿ ಮತ್ತು ನೆಲ್ಲೂ ಮಠದ ನಡುವೆ ಕಳೆದ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಯುತ್ತಿದೆ.
ಆದರೆ ಇದರ ನಡುವೆ ಹೈಕೋರ್ಟ್ ನಲ್ಲಿ ತಮ್ಮ ಪರವಾಗಿ ಆದೇಶ ಬಂದಿದೆ ಎಂದು ಹೇಳಿಕೊಂಡು ಬೆಳ್ಳಂಬೆಳಗ್ಗೆ ಜಾಮಿಯಾ ಮಸೀದಿ ಕಮಿಟಿ ಸುಮಾರು 200 ಹೆಚ್ಚು ಯುವಕರೊಂದಿಗೆ ಬಂದು ಏಕಾಏಕಿ ವಿವಾದಿತ ಮಠದ ಮನೆಯ ಜಾಗದಲ್ಲಿದ್ದ ಮನೆ ಮತ್ತು ಅಂಗಡಿಯನ್ನ ನೆಲಸಮ ಮಾಡಿದೆ. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದೆ.
ವಿವಾದಿತ ಜಾಗ ಸೇರಿದಂತೆ ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನ ಕೈಗೊಂಡಿದ್ದು. ಎಸ್ಪಿ ವಿಕ್ರಮ್ ಅಮಟೆ ನೆಲೂರು ಮಠದ ಮನೆಯವರು, ಹಿಂದೂಪರ ಸಂಘಟನೆಗಳ ಮುಖಂಡರು, ಬಿಜೆಪಿ ಮುಖಂಡರು ಹಾಗೂ ಜಾಮಿಯಾ ಮಸೀದಿ ಕಮಿಟಿಯೊಂದಿಗೆ ಸುಧೀರ್ಘ ಸಭೆ ನಡೆಸಿ ಎರಡೂ ಕಡೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ಅನುಮತಿ, ನಗರಸಭೆಯ ಅನುಮತಿಯನ್ನೂ ಪಡೆದುಕೊಳ್ಳದೆ ತೆರವು ಕಾರ್ಯಾಚರಣೆಗೆ ಮುಂದಗಿದ್ದಕ್ಕೆ ಜಾಮಿಯಾ ಮಸೀದಿ ಕಮಿಟಿಯವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಾಮಿಯಾ ಮಸೀದಿಯ ಆತುರದ ನಿರ್ಧಾರ ಬಿಜೆಪಿ, ಹಿಂದೂಪರ ಸಂಘಟನೆಗಳಷ್ಟೇ ಅಲ್ಲದೆ ಪೊಲೀಸ್ ಇಲಾಖೆಯ ಕೆಂಗಣ್ಣಿಗೂ ಗುರಿಯಾಗಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 5 KSRP ತುಕಡಿ ನಿಯೋಜನೆ ಮಾಡಲಾಗಿದ್ದು. ಮಠದ ಕುಟುಂಬಸ್ಥರು ,ಹಿಂದೂ ಸಂಘಟನೆ, ಜಾಮಿಯಾ ಕಮಿಟಿ ,ವಕ್ಫ್ ಅಧಿಕಾರಿಗಳ ಜೊತೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ಸಭೆ ಮಾಡಿ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.
ಎರಡು ದಶಕಗಳಿಂದ ನೆಲ್ಲೂರು ಮಠ ಹಾಗೂ ಜಾಮಿಯಾ ಮಸೀದಿ ನಡುವೆ ವಿವಾದಕ್ಕೆ ಕಾರಣಾವಾಗಿದ್ದ ಜಾಗ ಇಂದು ಅಕ್ಷರಶಃ ರಣಭೂಮಿಯಾಗಿ ಮಾರ್ಪಟ್ಟಿದೆ. ಪೊಲೀಸರ ಜಾಣ್ಮೆ ಮತ್ತು ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಮಹಾ ದುರಂತವೊಂದು ತಪ್ಪಿದಂತಾಗಿದ್ದು, ನಗರದಾದ್ಯಂತ ಖಾಕಿ ಹದ್ದಿನ ಕಣ್ಣಿಟ್ಟಿದ್ರೂ ಕೂಡಾ ಯಾವ ಸಮಯದಲ್ಲಿ ಏನಾಗುತ್ತೆ ಅನ್ನೋದೆ ಗೊತ್ತಾಗದಂತಾಗಿದೆ. ಕೋಮುಸೂಕ್ಷ್ಮ ಜಿಲ್ಲೆ ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಿದೆ.
Nellore Mutt controversial site building evacuated