ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಕುಮರಗಿರಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ. 9ರಿಂದ 11ರವರೆಗೆ ಪಂಗುನಿ ಉತ್ತಿರ ಜಾತ್ರೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್ ಕುಮಾರ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 9ರಂದು ಬೆಳಗ್ಗೆ 6ಗಂಟೆಯಿಂದ 7.30ರವರೆಗೆ ಧ್ವಜಾರೋಹಣ ಹಾಗೂ ಕಂಕಣಧಾರಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಏ. 10ರಂದು ಬೆಳಗ್ಗೆ 9ಗಂಟೆಯಿಂದ 10.30ರವರೆಗೆ ಶ್ರೀಅವರಿಗೆ ಅಭಿಷೇಕ, ಅಲಂಕಾರ ಹಾಗೂ ಬೆಳಗ್ಗೆ 10.30ಕ್ಕೆ ಶ್ರೀಸ್ವಾಮಿಯವರ ಉತ್ಸವ ಮೂರ್ತಿಯು ದೇವಾಲಯದಿಂದ ಹೊರಟು ಮಲ್ಲೇನಹಳ್ಳಿ, ಬಾವಿಕಟ್ಟೆ, ಹೆಬ್ಬಳ್ಳಿ, ಮಾವಿನಹಳ್ಳ, ಅರಿಶಿನಗುಪ್ಪೆ, ದಾಸರಹಳ್ಳಿ, ಕೈಮರದಿಂದ ಅತ್ತಿಗಿರಿ ತಲುಪಿ ಪುನಃ ಕಂಬಿಹಳ್ಳ, ಶಾಂತಿಪುರ, ಕಬ್ಬಿಣ ಸೇತುವೆ, ಹೊಸಪೇಟೆ, ಗುಡ್ಡೇನಹಳ್ಳಿ, ಅರವಿಂದ ನಗರ, ನೀರುಗುಂಡಿ, ಎಮ್ಮೇಖಾನ್, ಭಕ್ತರಹಳ್ಳಿಯ ಮೂಲಕ ಸ್ವಾಮಿಯ ಸನ್ನಿಧಿ ತಲುಪಲಿದೆ ಎಂದು ಮಾಹಿತಿ ನೀಡಿದರು.
ಏ. 11ರಂದು ಉತ್ತಿರಾ ನಕ್ಷತ್ರ ಶುಭಯೋಗ ಕೂಡಿದ ಶುಭದಿನದಲ್ಲಿ ಬೆಳಗ್ಗೆ 6ಗಂಟೆಯಿಂದ ಶ್ರೀಯಎಂದರು ಅಭಿಷೇಕ, ಅಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ನಡೆಯಲಿದೆ. ಇದಾದನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗುಇ ವಳ್ಳಿ ದೇವಯಾನೆಯರ ಕಲ್ಯಾಣೋತ್ಸವ ನಡೆಯಲಿದೆ ಎಂದರು.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12 ಗಂಟೆಗೆ ಸರಳ ಸಾಮೂಹಿಕ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಹತ್ತಕ್ಕೂ ಹೆಚ್ಚು ಜೋಡಿಗಳು ನವ ಜೀವನಕ್ಕೆ ಕಾಲಿಡಲಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರು 15 ದಿನಗಳ ಮೊದಲೇ ಹೆಸರು ನೋಂದಣೆ ಮಾಡಿಕೊಳ್ಳಬೇಕು. ವರನಿಗೆ ಕಡ್ಡಾಯವಾಗಿ 21 ವರ್ಷ ಹಾಗೂ ಮಧುವಿಗೆ 18 ವರ್ಷ ತುಂಬಿರಬೇಕು. ಮಧುವಿಗೆ ತಾಳಿ, ಕಾಲುಂಗುರ ಬಟ್ಟೆ ಹಾಗೂ ವರನಿಗೆ ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ, ಮಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ಲೋಕೇಶ್, ಉಪಾಧ್ಯಕ್ಷೆ ಕಾವ್ಯ ಮೋಹನ್ ಕುಮಾರ್ ಉಪಸ್ಥಿತರಿರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ. ಗುಣಶೇಖರ್, ಉಪಾಧ್ಯಕ್ಷರಾದ ಎ.ಮಹಾಲಿಂಗಂ, ಜಿ.ರಮೇಶ್, ಸಹಕಾರ್ಯದರ್ಶಿ ಅರಿವಳಗನ್, ಖಜಾಂಚಿ ಕೆ.ಕೃಷ್ಣರಾಜ್, ನಿರ್ದೇಶಕರಾದ ಜಿ.ರಘು, ಮುರುಗನ್, ಪುವೆಂದಿರನ್, ಸಿ.ವೆಂಕಟೇಶ್ ಮತ್ತಿತರರಿದ್ದರು.
Panguni Uthira Jatra at Sri Subrahmanya Swamy Temple