ಚಿಕ್ಕಮಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಎಸ್ಸಿಎಸ್ಪಿ/ ಟಿಎಸ್ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಬಳಸಲು ಹಿಂದಿರುಗಿಸಬೇಕೆಂದು ಆಗ್ರಹಿಸಿ ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಇಂದು ಬೆಳಗ್ಗೆ ನಗರದ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ೨೦೧೩-೧೪ ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯ ಕಾಯಿದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿದ ಯೋಜನೆ ಎಂದರು.
ಅಭಿವೃದ್ಧಿಯ ಅಂತರ ಅಂದರೆ ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸೂಚಕಗಳಲ್ಲಿರುವ ವ್ಯತ್ಯಾಸಗಳು ಎಂದು ವ್ಯಾಖ್ಯಾನಿಸಲಾಗಿದ್ದು, ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶ ಎಂದು ಹೇಳಿದ್ದಾರೆ.
೨೦೧೫ ರ ಮಾನವ ಅಭಿವೃದ್ಧಿ ವರದಿ ಪ್ರಕಾರ ಇತರ ಸಮುದಾಯಗಳಿಗೆ ಹೋಲಿಸಿದರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅಭಿವೃದ್ಧಿಗಿಂತಲು ದಲಿತರು ಕಡಿಮೆ ಅಭಿವೃದ್ಧಿ ಹೊಂದಿರುವುದು, ಹೀಗಿರುವಾಗ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಅಸಮಾನತೆಯ ಅಂತರವನ್ನು ಕಡಿಮೆ ಮಾಡುವ ಯೋಜನೆಗಳಲ್ಲಿ ವಿನಿಯೋಗಿಸಬೇಕೆಂದು ಒತ್ತಾಯಿಸಿದರು.
ರಾಜ್ಯಸರ್ಕಾರ ೨೫ ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ, ೧೫ ಸಾವಿರ ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನು ಸರ್ಕಾರ ಮಾಡಿದೆ ಎಂದು ದೂರಿದರು.
ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿರುವುದು ದಲಿತ ಸಮುದಾಯಗಳಿಗೆ ಬಗೆದ ಮಹಾ ದ್ರೋಹ ಎಂದು ದೂರಿದ ಅವರು, ಸರ್ಕಾರದ ಈ ನೀತಿಯನ್ನು ಖಂಡಿಸಿದ್ದಾರೆ.
ಕೂಡಲೇ ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಮೀಸಲಿಟ್ಟು, ದಲಿತರ ಅಭಿವೃದ್ಧಿಗೆ ಬಳಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ರಘು, ಕೃಷ್ಣಮೂರ್ತಿ, ಪುಟ್ಟಸ್ವಾಮಿ, ವಿರೂಪಾಕ್ಷ, ಮಂಜೇಗೌಡ ಮತ್ತಿತರರು ಭಾಗವಹಿಸಿದ್ದರು.
Protest demanding SCST/TSP funds be used for Dalit development