ತರೀಕೆರೆ: ಸಾಹಿತ್ಯ ಸಮ್ಮೇಳನಗಳು ಅಬ್ಬರ, ಆಡಂಬರಗಳಿಗೆ ಆದ್ಯತೆ ನೀಡದೆ ಅರ್ಥಪೂರ್ಣವಾಗಿ ಭಾಷೆ ಕಟ್ಟಲು, ನಾಡಿನ ಉಳಿವಿನ ಕುರಿತು ಜಾಗೃತಿ ಮೂಡಿಸಲು, ನಮ್ಮ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಲು ನಡೆಯುವಂತಾಗಬೇಕು ಎಂದು ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಏರ್ಪಡಿಸಿದ್ದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಕನ್ನಡಿಗರೆಲ್ಲರೂ ಅಂತರ ತೊರೆದು ಒಂದಾಗಿ ಆನಂದಿಸಲು ಸಹಕಾರಿಯಾಗಿದೆ.
೧೫೦೦ ವರ್ಷಗಳ ಶಾಸನಬದ್ಧ ಪರಂಪರೆ ಇರುವ ಕನ್ನಡ ಭಾಷೆಗೆ ಭವ್ಯ, ಚಿಂತನಶೀಲ, ಆಲೋಚನೆಯ ಸುದೀರ್ಘ ಇತಿಹಾಸವಿದೆ. ಅತಿ ಪ್ರಾಚೀನ, ಅಷ್ಟೇ ಶ್ರೀಮಂತಿಕೆಯುಳ್ಳ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಜಗತ್ತಿನ ೫೦ ಭಾಷೆಗಳ ಪೈಕಿ ಕನ್ನಡವೂ ಒಂದು ಎಂಬುದು ನಮ್ಮೆಲ್ಲರ ಹಿರಿಮೆ ಎಂದು ಸಂತಸ ವ್ಯಕ್ತಪಡಿಸಿದರು.
ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕನ್ನಡದ ಗಾಳಿ, ನೀರು, ಊಟ ಶ್ರೇಷ್ಠ. ಮಕ್ಕಳು ತಂದೆ, ತಾಯಿ ಹಾಕಿದ ಹೆಜ್ಜೆಯಲ್ಲಿ ಸಾಗಬೇಕು. ಮಾತೃಭಾಷೆಯನ್ನು ಪ್ರೀತಿಸಿ ಆಧರಿಸಬೇಕು. ಬೆವರು ಹರಿಸಿ ಸಹಸ್ರಾರು ಜನರ ಹೊಟ್ಟೆ ತುಂಬಿಸುವ ಅನ್ನದಾತನಿಗೆ ಗೌರವ ನೀಡುವುದು ಕಡ್ಡಾಯವಾಗಬೇಕು ಎಂದು ಹೇಳಿದರು.
ಡಾ. ಸಿ.ಕೆ.ಸುಬ್ಬರಾಯ ಮಾತನಾಡಿ, ಕರ್ನಾಟಕ ಪರ ಭಾಷಾ ಸಹಿಷ್ಣುತೆ ಹೊಂದಿದ್ದು, ಇಲ್ಲಿರುವ ಪ್ರತಿಯೊಬ್ಬರೂ ನಾಡು ನುಡಿಯನ್ನು ಗೌರವಿಸಬೇಕು. ಕಸಾಪ ಉದಯೋನ್ಮುಖ ಲೇಖಕಕರನ್ನು ಉತ್ತೇಜಿಸುತ್ತಿದ್ದು, ಇಂದಿನ ಯುವ ಸಮೂಹ ಸಾಹಿತ್ಯಾಭಿರುಚಿ ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಇತರೆಡೆ ಮಾತ್ರವಲ್ಲ, ತರೀಕೆರೆ ತಾಲೂಕಿನಲ್ಲೂ ಎಲ್ಲ ಧರ್ಮ, ಪಂಥಗಳು ಸಾತ್ವಿಕ ಮನಸ್ಸಿನಿಂದ ನೆಲೆಗೊಂಡಿವೆ. ಕಸಾಪ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವರಿಗೆ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಎಸಿ ಡಾ. ಕೆ.ಜೆ.ಕಾಂತರಾಜ್, ಪುರಸಭೆ ಅಧ್ಯಕ್ಷ ವಸಂತ್ಕುಮಾರ್, ಮಾಜಿ ಉಪಾಧ್ಯಕ್ಷೆ ಎಂ.ಗಿರಿಜಾ, ಸದಸ್ಯೆ ಪಾರ್ವತಮ್ಮ, ತಹಸೀಲ್ದಾರ್ ವಿಶ್ವಜೀತ ಮೆಹತಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್, ಸಾಹಿತಿ ಹಳೆಕೋಟೆ ರಮೇಶ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಇತರರಿದ್ದರು.
20th District Kannada Literary Conference inaugurated