ಚಿಕ್ಕಮಗಳೂರು: ಜಿಲ್ಲೆಯ ಸಂಜೀವಿನಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಉತ್ಪಾದಿಸಿರುವ ವಿವಿಧ ಬಗೆಯ ಆಹಾರ ಪದಾರ್ಥಗಳು ಹಾಗೂ ಕರಕುಶಲ ವಸ್ತುಗಳನ್ನು ಖರೀದಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್ ಕರೆನೀಡಿದರು.
ಅವರು ಇಂದು ನಗರದ ಆಜಾದ್ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಸ್ವ-ಸಹಾಯ ಸಂಘಗಳ ಮಹಿಳೆಯರು ಸ್ವತಃ ಮನೆಯಲ್ಲಿ ತಯಾರಿಸಿರುವ ತಿಂಡಿ ತಿನಿಸು, ವಿವಿಧ ಬಗೆಯ ಚಟ್ನಿಪುಟಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇಂದಿನಿಂದ ನಾಲ್ಕು ದಿನಗಳವರೆಗೆ ನಡೆಯಲಿದ್ದು, ವಸ್ತುಗಳ ಪ್ರದರ್ಶನಕ್ಕೆ ಬೇರೆ ಬೇರೆ ಮಳಿಗೆಗಳನ್ನು ಸಿದ್ಧಗೊಳಿಸಿದ್ದೇವೆ, ಇದು ವ್ಯಾಪಾರಕ್ಕೆ ಉತ್ತೇಜನ ನೀಡುವ ಪ್ರಯತ್ನವಾಗಿದೆ ಎಂದರು.
ಸಾರ್ವಜನಿಕರು ಈ ಎಲ್ಲಾ ಮಳಿಗೆಗಳಿಗೆ ಭೇಟಿನೀಡಿ ತಿಂಡಿ ತಿನಿಸುಗಳನ್ನು ಖರೀದಿಸುವ ಮೂಲಕ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ ಮಾತನಾಡಿ, ಇಂದಿನಿಂದ ಶನಿವಾರದವರೆಗೆ ಸುಮಾರು ವಿವಿಧ ಬಗೆಯ ೭೦ ಆಹಾರ ಮಳಿಗೆಗಳು ಹಾಗೂ ಕರಕುಶಲ ವಸ್ತುಗಳು, ಗುಡಿ ಕೈಗಾರಿಕೆ ವಸ್ತುಗಳ ಮಳಿಗೆಗಳನ್ನು ಪ್ರಾರಂಭಿಸಲಾಗಿದ್ದು, ಅಡುಗೆ ಸಾಮಾಗ್ರಿ, ಅಲಂಕಾರಿಕ ವಸ್ತುಗಳು, ಬಟ್ಟೆಗಳು ಇಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದರು.
ಜಿಲ್ಲೆಯ ಪಾರಂಪರಿಕ ಆಹಾರ ಪದ್ಧತಿಯಾದ ಉಪ್ಪಿನಕಾಯಿ, ಅಪ್ಪಳ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಆರಂಭಿಸಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ನಗರಸಭಾಧ್ಯಕ್ಷೆ ಸುಜಾತಶಿವಕುಮಾರ್ ಮಾತನಾಡಿ, ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಆಹಾರದ ವಸ್ತುಗಳು ಹಾಗೂ ಗುಡಿಕೈಗಾರಿಕೆಯ ವಸ್ತುಗಳ ಇಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರು ಖರೀದಿಸುವ ಜೊತೆಗೆ ಮಹಿಳೆಯರ ಆರ್ಥಿಕ ಸದೃಢತೆಗೆ ಸಹಕರಿಸಬೇಕೆಂದು ವಿನಂತಿಸಿದರು.
ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಕುಟುಂಬ ನಿರ್ವಹಣೆಗೆ ಮುಂದಾಗಬೇಕು, ರೊಟ್ಟಿ ತಯಾರಿಕೆ, ಶುಚಿ ರುಚಿಯಾದ ಪುಳಿಯೊಗರೆ, ಖಾದ್ಯ ತೈಲಗಳು, ಖಾದಿ ಮೇಳ, ಲಾವಂಚ ಬೇರಿನ ಟೋಪಿ, ಆಟಿಕೆಗಳು ನೋಡುಗರನ್ನು ಮನಸೂರೆಗೊಳ್ಳುತ್ತಿವೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನೋಪಾಯಕ್ಕಾಗಿ ಗೃಹಬಳಕೆ ವಸ್ತುಗಳ ಮಾರಾಟ ಮಾಡುವ ಉದ್ದೇಶದಿಂದ ನಗರದ ಆಜಾದ್ ವೃತ್ತದಲ್ಲಿ ವಿವಿಧ ಬಗೆಯ ೭೦ ಮಳಿಗೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಬಡ ಹೆಣ್ಣುಮಕ್ಕಳು ತಯಾರಿಸಿರುವ ಆರೋಗ್ಯಪೂರ್ಣ ಆಹಾರ ಪದಾರ್ಥಗಳನ್ನು ನಾಗರೀಕರು ಖರೀದಿಸುವ ಮೂಲಕ ಮಹಿಳೆಯರು ಆರ್ಥಿಕ ಸಬಲರಾಗಲು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಡೇನಲ್ಮ್ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಪ್ರಾರಂಭದಲ್ಲಿ ೧೦ ಸಾವಿರ ನೀಡುತ್ತಿದ್ದು, ಈಗಾಗಲೇ ೧೬೦೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲಾಗಿದೆ. ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿದ ೬೦೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ೨೦ ಸಾವಿರ ರೂಗಳಂತೆ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಸುಮಾರು ೫೦೦ ಜನರಿಗೆ ೫೦ ಸಾವಿರ ರೂ ಸಾಲ ವಿತರಣೆ ಮಾಡಲಾಗಿದ್ದು, ಉತ್ತಮ ವಹಿವಾಟು ನಡೆಸಿ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದವರಿಗೆ ೧ ಲಕ್ಷ ರೂಗಳಿಂದ ೫ ಲಕ್ಷ ರೂಗಳವರೆಗೆ ಸಾಲಸೌಲಭ್ಯ ದೊರೆಯಲಿದೆ. ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕರೆನೀಡಿದರು.
ಕೇಂದ್ರ ಮತ್ತು ರಾಜ್ಯಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸ್ವ-ಸಹಾಯ ಸಂಘಗಳು ಬಳಸಿಕೊಳ್ಳುವ ಮೂಲಕ ಸಹಾಯಧನದ ಪ್ರಯೋಜನವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಾಲತೇಶ್ ಬಜಂತ್ರಿ, ಯೋಜನಾ ನಿರ್ದೇಶಕರಾದ ನಯನ, ಡಿಪಿಎಂಎನ್.ಆರ್.ಎಲ್.ಎಂ ರಾಜೇಂದ್ರ ಉಪಸ್ಥಿತರಿದ್ದರು.
Exhibition of products made by women of district level rural self-help groups