ಚಿಕ್ಕಮಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ೮೧೮ ಮತದಾರರ ಪೈಕಿ ೩೨೬ ಮಂದಿ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. ೩೯.೮೬ ರಷ್ಟು ಮತದಾನವಾಗಿದೆ.
ಬೆಳಿಗ್ಗೆ ೮ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಾಗ ನೀರಸವಾದ ಪ್ರತಿಕ್ರಿಯೆ ಕಂಡು ಬಂದಿತು. ೧೧.೩೦ರ ಬಳಿಕ ಮತದಾನ ಕೊಂಚ ವೇಗ ಪಡೆದುಕೊಂಡು ೧೨.೩೦ ರವರೆಗೆ ಸ್ವಲ್ಪಮಟ್ಟಿಗೆ ಬಿರುಸು ಕಂಡು ಬಂದಿತು. ಮಧ್ಯಾಹ್ನ ೧.೩೦ರ ಸುಮಾರಿಗೆ ಕೇವಲ ಶೇ.೩೦ ರಷ್ಟು ಮಾತ್ರ ಮತದಾನವಾಗಿತ್ತು.
ಮಧ್ಯಾಹ್ನ ೨ ಗಂಟೆ ನಂತರ ಮತದಾನದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡರೂ ಅನಂತರ ಮಂದಗತಿಗೆ ಇಳಿಯಿತು. ಸಂಜೆ ೪ ಗಂಟೆಯ ವೇಳೆಗೆ ಮತದಾನ ಮುಕ್ತಾಯಗೊಂಡಾಗ ಒಟ್ಟು ೩೨೬ ಮಂದಿ ಮತ ಚಲಾಯಿಸಿದ್ದು, ಶೇ.೩೯.೮೬ ರಷ್ಟು ಮತದಾನವಾಗಿದೆ.
ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನ ಛತ್ರದಲ್ಲಿ ಏರ್ಪಡಿಸಿದ್ದ ಮತಗಟ್ಟೆಯು ಚಿಕ್ಕಮಗಳೂರು, ಕಳಸಾಪುರ, ಬೆಳವಾಡಿ, ಮೂಡಿಗೆರೆ, ಸಖರಾಯಪಟ್ಟಣ, ಕಡೂರು, ತರೀಕೆರೆ, ಬೀರೂರು ಹಾಗೂ ಅಜ್ಜಂಪುರ ವ್ಯಾಪ್ತಿಗೆ ಒಳಪಟ್ಟಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮ ಹಾಗೂ ರಘುನಾಥ್ ಎಸ್. ಸ್ಪರ್ಧಿಸಿದ್ದು, ಇವರಲ್ಲಿ ಒಬ್ಬರ ಆಯ್ಕೆಗಾಗಿ ಶಾಂತಿಯುತವಾಗಿ ಮತದಾನ ನಡೆಯಿತು. ಅನಂತರ ಮತ ಎಣಿಕೆ ಕಾರ್ಯ ನಡೆಯಿತು. ಸಹಕಾರ ಇಲಾಖೆಯ ಒಟ್ಟು ಎಂಟು ಮಂದಿ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೊಲೀಸ್ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಎಕೆಬಿಎಂಎಸ್ನ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಜಿಲ್ಲೆಯಿಂದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಎದುರಾಳಿಯಾಗಿ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ಅವರ ಆಯ್ಕೆ ಅವಿರೋಧವಾಗಿ ಆಗಲಿದೆ.
Election for the post of AKBMS president in the city