ಚಿಕ್ಕಮಗಳೂರು: ದೇಶದ ಎಲ್ಲ ಜನರಿಗೂ ಡಾ.ಬಿ.ಆರ್.ಅಬೇಡ್ಕರ್ ಅವರು ಸಂವಿಧಾನದ ಮೂಲಕ ರಾಜಕೀಯ ಸಮಾನ ಹಕ್ಕು ನೀಡಿದ್ದಾರೆ. ಆ ಹಕ್ಕನ್ನು ಪ್ರಾಮಾಣಿಕವಾಗಿ ಚಲಾಯಿಸುತ್ತಿದ್ದೇವೆಯೇ ಎಂಬ ಬಗ್ಗೆ ಎಲ್ಲರೂ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.
ಐಡಿಎಸ್ಜಿ ಕಾಲೇಜಿನಲ್ಲಿ ಐಸಿರಿ ಫೌಂಡೇಶನ್ ಮಂಗಳವಾರ ಹಮ್ಮಿಕೊಂಡಿದ್ದ ವಿ ದ ಪೀಪಲ್ ಆಫ್ ಇಂಡಿಯಾ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ ಸಂವಿಧಾನ ಪೀಠಿಕೆಯಲ್ಲಿ ಧರ್ಮ ನಿರಪೇಕ್ಷತೆ, ಸೌಹಾರ್ದತೆ, ಸಹಬಾಳ್ವೆ ಮತ್ತಿತರೆ ಅಂಶಗಳ ಬಗ್ಗೆ ತಿಳಿದಿದ್ದೇವೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಅಂಬೇಡ್ಕರ್ ಆಶಯವಾಗಿತ್ತು
ಅದರಂತೆ ದೇಶ ಮುನ್ನೆಡೆಯುತ್ತಿದೆಯೇ ಎಂಬ ಚಿಂತನೆ ಅಗತ್ಯ. ಅಂದು ಪದವಿ ಪಡೆದವರಿಗೆ,ಭೂಮಾಲೀಕರಿಗೆ, ಶ್ರಿಮಂತರಿಗೆ ಓಟಿನ ಹಕ್ಕು ಕೊಡೋಣ ಎಂಬ ಚರ್ಚೆ ನಡೆದಿತ್ತು. ಆಗ ಅಂಬೇಡ್ಕರ್ ಹಾಗೆ ಮಾಡಿದರೆ ದೇಶದ ಶೇ.೨೦ ಜನರಿಗಷ್ಟೇ ಹಕ್ಕು ಕೊಟ್ಟಂತಾಗುತ್ತದೆ. ಹೀಗಾಗಿ ಎಲ್ಲರಿಗೂ ವಯಸ್ಸಿನ ಆಧಾರದ ಮೇಲೆ ಮತದಾನದ ಹಕ್ಕು ನೀಡಬೇಕು
ಎಂದು ವಾದಿಸಿ ಅದರಲ್ಲಿ ಯಶಸ್ವಿಯಾದರು. ಈ ದೇಶದಲ್ಲಿರುವ ಎಲ್ಲರಿಗೂ ಸಮಾನವಾದ ರಾಜಕೀಯ ಓಟಿನ ಹಕ್ಕನ್ನು ಅಂಬೇಡ್ಕರ್ ನೀಡಿದ್ದಾರೆ. ಮತದ ಮೌಲ್ಯ ಬಡವ, ಬಲ್ಲಿದ ಎಲ್ಲರಿಗೂ ಒಂದೇ. ಮತ ಎಂಬ ವಜ್ರಾಯುಧವನ್ನು ನಮ್ಮ ಕೈಲಿ ಕೊಟಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ಚಲಾಯಿಸದೆ ಹಣ, ಆಮಿಷಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾಸಿದರು.
ಅಷ್ಟೊಂದು ಮೌಲ್ಯಯುತವಾದ ವಜ್ರಾಯುಧಕ್ಕೆ ಸಮನಾದ ಓಟಿನ ಹಕ್ಕನ್ನು ಮಾರಿಕೊಳ್ಳುವ ಮೂಲಕ ವ್ಯವಸ್ಥೆ ಹಾಳಾಗಿದೆ. ಪ್ರಜೆಗಳು ಬದಲಾಗದ ವಿನಾ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಕೀಲ ಸತ್ಯನಾರಾಯಣ ಉಪನ್ಯಾಸ ನೀಡಿ ಅಂಬೇಡ್ಕರ್ ವಿಚಾರ ಸಿದ್ದಾಂತ ಬಿಟ್ಟು ಅವರನ್ನು ಪೂಜೆ ಮಾಡಿ ಆಡಂಭರದ ಕಾರ್ಯಕ್ರಮ ಮಾಡಿದಲ್ಲಿ ಅರ್ಥವಿಲ್ಲ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಅಂಬೇಡ್ಕರ್ ಅವರು ಹಿಂದೂ ಬಿಲ್ ಕೋಡ್ ತಂದಿದ್ದರಿಂದ ಇಲ್ಲಿರುವ ಹೆಚ್ಚು ವಿದ್ಯಾರ್ಥಿನಿಯರಿಗೆ ಸಾಮಾಜಿಕ, ಶೈಕ್ಷಣಿಕ ರಾಜಕೀಯವಾದ ಹಕ್ಕು ದೊರೆತಿದೆ ಎಂದರು.
ಐಸಿರಿ ಫೌಡೇಶನ್ ನ ಮೋಹನ್ ಭಾರ್ಗವಪುರಿ ಪ್ರಾಸ್ತಾವಿಸಿ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ವಿಚಾರ ಮತ್ತು ತತ್ವ ಆದರ್ಶಗಳು ಬೇಕು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಸೋಮಶೇಖರ್ ಸ್ವಾಗತಿಸಿದರು. ಐಡಿಎಸ್ಜಿ ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಾಭಾರತಿ ಅಧ್ಯಕ್ಷತೆ ವಹಿಸಿದ್ದರು.
The system will not change unless the citizens change.