ಚಿಕ್ಕಮಗಳೂರು: ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿ ಕೆಲಸ ಮಾಡಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವುದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿ ನಗರದ ಆಜಾದ್ ವೃತ್ತದಲ್ಲಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಗಾಂಧೀಜಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ನಕಲಿ ಗಾಂಧಿಗಳ ಕುಟುಂಬ ದೇಶವನ್ನು ಲೂಟಿ ಎಸಗಿದ ಮೂಲ ರೂವಾರಿಗಳು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದ ಹೆರಾಲ್ಡ್ ಸಂಸ್ಥೆ ಕೇವಲ ಐದು ಜನರ ಕೈನಲ್ಲಿ ಸಿಲುಕಿ ನರಳುತ್ತಿದೆ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಸಂಸ್ಥೆ ಇಂದು ನಕಲಿ ಗಾಂಧಿಗಳ ಕುಟುಂಬದಲ್ಲಿ ಸಿಲುಕಿ ಭಾರೀ ಭ್ರಷ್ಟಚಾರದ ನಡೆಸಿದೆ. ೨೦೧೪ರಲ್ಲಿ ನ್ಯಾ.ಸುಬ್ರಹ್ಮಣ್ಯಸ್ವಾಮಿ ದಾಖಲಿಸಿದ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಸಹಚರರ ಮೇಲೆ ಭ್ರಷ್ಟಾಚಾರದ ಆರೋಪಿಗಳೆಂದು ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.
ಇದರಿಂದ ಕಾಂಗ್ರೆಸ್ ನಾಯಕರು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಸತ್ಯ ಬಯಲಿಗೆಳೆಯಲು ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದಾಗ ಕೆಲವು ನಕಲಿ ಗೂಂಡಾಗಳನ್ನು ಕಾಂಗ್ರೆಸ್ ನಾಯಕರು ಬಳಸಿಕೊಂಡು ಇಡೀ ಕಚೇರಿ ಮುಂಭಾಗ ಪ್ರತಿಭಟನೆ ನಾಟಕವಾಡಿ ದೇಶದ ಜನತೆಗೆ ಮಂಕುಬೂದಿ ಎರಚುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದಲ್ಲಿ ರಾಜ್ಯದ ಬೆಲೆಏರಿಕೆ, ಅಲ್ಪಸಂಖ್ಯಾತರ ಮೀಸಲಾತಿ, ಅವೈಜ್ಞಾನಿಕ ಜಾತಿಗಣತಿ, ಪಕ್ಷದ ನಾಯಕರ ವಿರುದ್ಧ ಪ್ರತಿಭಟನೆ ನಡೆಸಬೇಕು. ಆದರೀಗ ರಾಷ್ಟ್ರವನ್ನು ಕೊಳ್ಳೆ ಒಡೆಯುವ ನಾಯಕರ ಪರವಾಗಿ ಬೆಂಬಲ ಸೂಚಿಸುತ್ತಿರುವುದು ನಾಚಿಕೇಡಿನ ಸಂಗತಿ ಎಂದು ಆರೋಪಿಸಿದರು.
ರಾಜ್ಯದ ಟ್ರೋಲ್ಮಂತ್ರಿ ಪ್ರಿಯಾಂಕಾ ಖರ್ಗೆ ಇಡಿ ಹಾಗೂ ಐಟಿ ಇಲಾಖೆ ಆರ್ಎಸ್ಎಸ್ ಕಚೇರಿಗೆ ದಾಳಿ ನಡೆಸುತ್ತಿಲ್ಲ ಎನ್ನುತ್ತಿದ್ದು, ಪ್ರಸ್ತುತ ಕಚೇರಿ ಕೋಟ್ಯಾಂತರ ಸ್ವಯಂ ಸೇವಕರ ಬೆವರಿನ ಹಣದಿಂದ ಕಟ್ಟಿದೆ ಹೊರತು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ನೂತನ ಕಚೇರಿಯಂಥಲ್ಲ ಎಂದು ಲೇವಡಿ ಮಾಡಿದರು.
ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಬಿಜೆಪಿ ವಿನಾಕಾರಣ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಎಸಗುವುದಿಲ್ಲ, ಸತ್ಯಾಸತ್ಯತೆ ಅರಿತು ದೂರುತ್ತದೆ. ಈ ಬಾರಿಯು ನ್ಯಾಷನಲ್ ಹೆರಾಲ್ಡ್ನಲ್ಲಿ ಅಕ್ರಮ ಹಣ ವರ್ಗಾವಣೆ ಖಚಿತತೆ ಅರಿತು ಆರೋಪ ಮಾಡಿದೆ. ಅಲ್ಲದೇ ಪತ್ರಿಕೆಯ ಮೂಲ ವಾರಸುದಾರರಿಗೂ ನೆರವು ನೀಡದೇ ಸಂಪೂರ್ಣ ಲೂಟಿವೆಸಗಿದೆ ಎಂದು ದೂರಿದರು.
ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಹತ್ಯೆ ವಿಷಯದಲ್ಲಿ ಕಾಂಗ್ರೆಸ್ ಬಹುದೊಡ್ಡ ನಾಟಕವಾಡಿದೆ. ಗೂಡ್ಸ್, ಗಾಂಧೀಜಿ ಹಂತಕನೆಂದು ಬಿಂಬಿಸಿ ಜನತೆಗೆ ದಿಕ್ಕುತಪ್ಪಿಸುತ್ತಿದೆ. ಹಿಂದೆ ಗಾಂಧೀಜಿ ಕಾಂಗ್ರೆಸ್ ವಿಸರ್ಜಿಸುವ ಚರ್ಚೆಗಳಾಗಿತ್ತು. ಇದನ್ನು ಸಹಿಸದೇ ಕಾಂಗ್ರೆಸ್ನವರು ಗಾಂಧಿಯನ್ನು ಹತ್ಯೆಗೈದು ಸುಳ್ಳು ಆರೋಪ ಗೂಡ್ಸೆ ಮೇಲೆ ಹೊರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ೧೯೩೮ರಲ್ಲಿ ಪ್ರಾರಂಭವಾಗಿ ಹಾಲಿ ೨೫೦೦ ಕೋಟಿ ಒಡೆತನದ ಹೆರಾಲ್ಡ್ ಪತ್ರಿಕೆಯನ್ನು ಕೇವಲ ೫೦ ಲಕ್ಷ ರೂ. ಖರೀದಿಸಿ ಭಾರೀ ಭ್ರಷ್ಟಚಾರ ಎಸಗಿರುವ ಆರೋಪ ಸೋನಿಯಾ, ರಾಹುಲ್ ಗಾಂಧಿ ಮೇಲೆ ಬಂದಿದೆ. ಈ ಬಗ್ಗೆ ಇಡಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಈರ್ವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಅಂಕಿತಾ, ಕಾರ್ಯದರ್ಶಿಗಳಾದ ರಾಜೇಶ್, ಶಶಿ ಆಲ್ದೂರು, ಪ್ರಧಾನ ಕಾರ್ಯದರ್ಶಿ ಸಚಿನ್ಗೌಡ, ನಗರಮಂಡಲ ಯುವಮೋರ್ಚಾ ಅಧ್ಯಕ್ಷ ಜೀವನ್ ಕೋಟೆ, ಗ್ರಾಮಾಂತರ ಮಂಡಲ ಅಧ್ಯಕ್ಷ ಪುನೀತ್, ನಗರಸಭೆ ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ರೂಪ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಕಬೀರ್, ಕೌಶಿಕ್, ಓಂಕಾರೇಗೌಡ, ಪ್ರದೀಪ್, ಎಸ್ಡಿಎಂ ಮಂಜು, ಅನ್ವರ್, ಚೈತ್ರಗೌಡ, ಮಂಜುನಾಥ್ ಸಂಗೀತ, ಜಯಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.
Protest by BJP Morcha