ಚಿಕ್ಕಮಗಳೂರು: ಬಾಬಾಬುಡನ್ಗಿರಿಯಲ್ಲಿ ಅರ್ಚಕರ ನೇಮಕ ಸಂಬಂಧ ಸುಪ್ರೀಂ ಕೋರ್ಟಿಗೆ ಸಹಮತ ಸೂಚಿಸಿ ಪ್ರಮಾಣಪತ್ರ ಸಲ್ಲಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ದರ್ಗಾದ ಪವಿತ್ರ ಪರಂಪರೆ ಮತ್ತು ಸಾಂವಿಧಾನಿಕ ಮೌಲ್ಯಗಳು ಹಾಗೂ ಸೂಫಿ ಸಂಸ್ಕೃತಿಗೆ ದ್ರೋಹ ಮಾಡಿದೆ ಎಂದು ಸೈಯದ್ ಬುಡನ್ ಶಾಖಾದ್ರಿ ವಂಶಸ್ಥ ಫಕ್ರುದ್ದೀನ್ಶಾಖಾದ್ರಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದರ್ಗಾದ ಪರಂಪರೆ, ಸೂಫಿ ಸಂಸ್ಕೃತಿ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಹೊಡೆತ ನೀಡಿದೆ. ಸುಪ್ರೀಂಗೆ ಪ್ರಮಾಣ ಪತ್ರ ಸಲ್ಲಿಸಿರುವುದು ೧೯೯೧ರ ಪ್ಲೇಸಸ್ ಆಫ್ ವರ್ಶಿಪ್ ಕಾಯಿದೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಧ್ಯಕ್ಷರಾಗಿರುವ ಕ್ಯಾಬಿನೆಟ್ ಉಪಸಮಿತಿಯ ಸಭೆಯಲ್ಲಿ ನಮ್ಮ ಕಡೆಯಿಂದ ೪ ಜನರಿಗೆ ಮಾತನಾಡಲು ಮಾತ್ರ ಅವಕಾಶ ನೀಡಿದ್ದರು. ಆದರೆ, ವಿರೋಧ ಪಕ್ಷದಿಂದ ಇಬ್ಬರು ಸ್ವಾಮೀಜಿಗಳು, ಸಿ.ಟಿ.ರವಿ ಸೇರಿ ಏಳು ಮಂದಿಗೆ ಅವಕಾಶ ನೀಡಿದರು ಎಂದು ತಿಳಿಸಿದರು.
ಮೂಡಿಗೆರೆ ಶಾಸಕಿ ನಯನಾಮೋಟಮ್ಮ ಅವರು ಸೂಫಿ ಪರಂಪರೆಯ ಬದಲು ದತ್ತಜಯಂತಿಯನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಂಡರು. ಜಮೀರ್ಅಹ್ಮದ್ ಖಾನ್ ಅವರು ಸಿ.ಟಿ.ರವಿಗೆ ಭಯಗೊಂಡು ಮಾತನಾಡುತ್ತಾರೆ. ಇದರಿಂದ ಸಂವಿಧಾನದ ಮೌಲ್ಯಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಅವರ ನಿಷ್ಠೆಯ ಬಗ್ಗೆ ಪ್ರಶ್ನೆಗಳು ಏಳುತ್ತವೆ ಎಂದು ಹೇಳಿದರು.
ಬಾಬಾಬುಡನ್ ದರ್ಗಾವನ್ನು ಸಜ್ಜಾದ ನಶೀನ್ ಮತ್ತು ಶಾಖಾದ್ರಿಗಳು ನಿರ್ವಹಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರವು ಸಜ್ಜಾದೆ ನಿಶಾನೆ ಅವರ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೇವಲ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ ಎಂದು ದೂರಿದರು.
ಮತಬ್ಯಾಂಕ್ ರಾಜಕೀಯದ ಭಾಗವಾಗಿ ಅರ್ಚಕರ ನೇಮಕಾತಿಗೆ ಸಹಮತ ವ್ಯಕ್ತಪಡಿಸಿ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿರುವ ಕಾಂಗ್ರೆಸ್ ವಿರುದ್ಧ ದರ್ಗಾದ ಬಗ್ಗೆ ಅಭಿಮಾನ ಇರುವ ಎಲ್ಲ ಭಕ್ತರಿಗೂ ಕಾಂಗ್ರೆಸ್ ನಮಗೆ ಮೋಸ ಮಾಡಿದೆ ಎಂಬ ಸತ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಯೂಸಫ್ ಹಾಜಿ ಮತ್ತಿತರರು ಇದ್ದರು.
Betrayal of Sufi culture by the state government