ಚಿಕ್ಕಮಗಳೂರು: ಇಲ್ಲಿನ ನಗರಸಭೆಗೆ ಪ್ರಸ್ತುತ ಆರ್ಥಿಕ ವರ್ಷದ ಆರಂಭದಲ್ಲಿ ೧೮ ದಿನದಲ್ಲಿ ಸುಮಾರು ೨.೩೬ ಕೋಟಿ ರೂ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗಿದೆ ಎಂದು ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ೨೦೨೪-೨೫ ನೇ ಸಾಲಿನಲ್ಲಿ ನಗರಸಭೆ ೧೯.೩೪ ಕೋಟಿ ರೂ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ೨೦೨೫-೨೬ನೇ ಸಾಲಿಗೆ ೧೯.೯೨ ಕೋಟಿ ರೂ ಸಂಗ್ರಹದ ಗುರಿಹೊಂದಲಾಗಿದೆ. ಏ.೧ ರಿಂದ ೧೭ ರವರೆಗೆ ೨.೩೬ ಕೋಟಿ ರೂ ಸಂಗ್ರಹವಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಖಾತೆಯಾಗಿರುವ ೩೫ ಸಾವಿರ ಸ್ವತ್ತುಗಳಿವೆ ಎಂದು ವಿವರಿಸಿದರು.
ಈ ಪೈಕಿ ಸುಮಾರು ೨೨ ಸಾವಿರ ಮನೆಗಳು ಇದ್ದು, ೪ ಸಾವಿರ ವಾಣಿಜ್ಯ ಕಟ್ಟಡಗಳಿವೆ. ಇವುಗಳೆಲ್ಲವೂ ಇ-ಖಾತೆಯಾಗಿದ್ದು, ಅಭಿಯಾನದ ಮೂಲಕ ಇನ್ನುಳಿದ ಇ-ಖಾತೆಗಳಿಗೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಏಪ್ರಿಲ್ನಲ್ಲಿ ತೆರಿಗೆ ಪಾವತಿಸುವವರಿಗೆ ಶೇ.೫ ರಷ್ಟು ಸರ್ಕಾರ ರಿಯಾಯಿತಿ ನೀಡಿದ್ದು, ಇದರ ಪ್ರಯೋಜನ ಪಡೆಯಲು ನಾಗರೀಕರು ನಿರೀಕ್ಷೆಗೂ ಮೀರಿ ಮುಂದೆ ಬರುತ್ತಿದ್ದಾರೆ. ಖಾಲಿಯಾಗಿದ್ದ ಬ್ಯಾಂಕ್ ಕೌಂಟರ್ಗಳು ಹಣ ಕಟ್ಟಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆಂದು ಮಾಹಿತಿ ನೀಡಿದರು.
ಹಿರಿಯ ನಾಗರೀಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಳದಲ್ಲಿ ಕುಳಿತುಕೊಳ್ಳಲು ಶಾಮಿಯಾನ ಹಾಕಿ ಖುರ್ಚಿಗಳನ್ನು ಹಾಕುವ ಮೂಲಕ ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಸುಮಾರು ೪ ಸಾವಿರ ಮನೆಗಳು ಹಾಗೂ ೨ ಸಾವಿರ ನಿವೇಶನಗಳು ನಿರ್ಮಾಣವಾಗಿದ್ದು, ಇವುಗಳಿಗೆ ನಗರಸಭೆಯಿಂದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ನಗರಸಭೆಗೆ ತೆರಿಗೆ ಪಾವತಿ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಇ-ಖಾತೆ ಮಾಡಿಕೊಡಲು ಆದೇಶ ಹೊರಡಿಸಿದೆ ಎಂದು ತಿಳಿಸಿದರು.
೨೦೨೪ ರ ಸೆಪ್ಟೆಂಬರ್ ಮಾಹೆಯ ಹಿಂದೆ ಆಸ್ತಿ ಖರೀದಿ ಮಾಡಿ ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಆಗಿದ್ದರೆ ಅದರ ದಾಖಲೆಯೊಂದಿಗೆ ನಗರಸಭೆಗೆ ಅರ್ಜಿ ಸಲ್ಲಿಸಿದರೆ ಒಮ್ಮೆ ಮಾತ್ರ ದ್ವಿಗುಣ ಕಂದಾಯ ಕಟ್ಟಿಸಿಕೊಂಡು ಬಿ-ಖಾತೆ ಮಾಡಿಕೊಡಲಾಗುವುದು. ಮುಂದಿನ ವರ್ಷದಿಂದ ಸಿಂಗಲ್ ಕಂದಾಯ ಕಟ್ಟಬೇಕು ಎಂದು ಹೇಳಿದರು.
ಮೇ.೧೦ ರವರೆಗೆ ಇದಕ್ಕೆ ಕಾಲಾವಕಾಶ ನೀಡಲಾಗಿದ್ದು ಈ ಅವಧಿಯ ಒಳಗೆ ನಾಗರೀಕರು ಇದರ ಪ್ರಯೋಜನ ಪಡೆಯಬೇಕು. ನಿಗಧಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಇಷ್ಟೇ ಅಲ್ಲ ಸಂಬಂಧಪಟ್ಟ ಆಸ್ತಿಗೆ ನೀಡಲಾಗಿರುವ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದರು.
ಇ-ಖಾತೆ ಅಭಿಯಾನ: ನಗರಸಭೆ ವ್ಯಾಪ್ತಿಯಲ್ಲಿ ಹಲವು ನಿವೇಶನ ಹಾಗೂ ಮನೆಗಳು ಇ-ಖಾತೆಯಾಗಿಲ್ಲ ಆದ್ದರಿಂದ ಇ-ಖಾತೆಯ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ನಗರದ ಪ್ರತೀ ಮನೆಗಳಿಗೆ ತೆರಳಿ ಇ-ಖಾತೆ ಮಾಡಿಕೊಡಲಾಗುವುದೆಂದು ವಿವರಿಸಿದರು.
ಕ್ರಯಪತ್ರ, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಅರ್ಜಿ, ಇಸಿಯನ್ನು ಮನೆಗೆ ಬರುವ ಸಿಬ್ಬಂದಿಗೆ ನೀಡಿದರೆ ಎರಡೇ ದಿನಗಳಲ್ಲಿ ಇ-ಖಾತೆ ವಿತರಿಸಲಾಗುವುದು. ಇದರ ಸದುಪಯೋಗಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
Municipal Corporation collects Rs 2.36 crore in property tax in 18 days