ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ ಒಂದು ವರ್ಗವನ್ನು ಓಲೈಸುವ ಸಲುವಾಗಿ ಒಕ್ಕಲಿಗ ಸಮಾಜದ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಈ ಗಣತಿ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ೨೦೧೫ ರಲ್ಲಿ ಸಮೀಕ್ಷೆ ಮಾಡುವಾಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುವುದೆಂದು ತಿಳಿಸಿ, ನಂತರ ಅದನ್ನೇ ಜಾತಿ ಗಣತಿಯೆಂದು ಹೇಳುತ್ತಿರುವುದು ಖಂಡನೀಯ ಎಂದರು.
ಮುಸ್ಲಿಮರ ಸಂಖ್ಯೆ ಹೆಚ್ಚಿಸಿ ಒಕ್ಕಲಿಗರು, ಲಿಂಗಾಯಿತರು ಸೇರಿದಂತೆ ವಿವಿಧ ಪ್ರಮುಖ ಜಾತಿಗಳ ಜನಸಂಖ್ಯೆಯ ಇಳಿಕೆ ಎಂದು ತೋರಿಸುತ್ತಿದೆ. ಒಕ್ಕಲಿಗ ಜನಾಂಗ ಉಪ ಪಂಗಡಗಳು ಜನಸಂಖ್ಯೆ ರಾಜ್ಯದಲ್ಲಿ ಅಂದಾಜು ಒಟ್ಟು ೧.೨೦ ಕೋಟಿ ಇದ್ದಾರೆ. ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಾಹಿತಿಯಿದೆ. ಆದರೆ ರಾಜ್ಯ ಸರ್ಕಾರ ಕೇವಲ ೬೧ ಲಕ್ಷ ಒಕ್ಕಲಿಗ ಜನ ಸಂಖ್ಯೆಯನ್ನು ತೋರಿಸುತ್ತಿದೆ ಇದನ್ನು ಸಂಘ ವಿರೋಧಿಸುತ್ತದೆ ಎಂದರು.
ಆಯೋಗ ನೇಮಿಸಿರುವ ವ್ಯಕ್ತಿಗಳು ಇಡೀ ಜಿಲ್ಲೆಯಲ್ಲಿ ಯಾರ ಮನೆಗೂ ಬಂದು ಸಮೀಕ್ಷೆ ಮಾಡಿಲ್ಲ. ಒಕ್ಕಲಿಗರು ಮತ್ತು ಲಿಂಗಾಯತರನ್ನು ಎಲ್ಲಾ ತರಹದ ಸೌಲಭ್ಯಗಳಿಂದ ದೂರ ಇಡುವ ಹುನ್ನಾರ ಇದೆಂದರು.
೧೦ ವರ್ಷಗಳ ಹಿಂದೆಯೇ ರಾಜ್ಯದ ಒಟ್ಟು ಜನಸಂಖ್ಯೆ ೬.೩೫ ಕೋಟಿ ಇದ್ದು, ಆಯೋಗದ ವರದಿಯಲ್ಲಿ ೫.೯೮ ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಉಳಿದ ೩೭ ಲಕ್ಷ ಜನಸಂಖ್ಯೆ ಬಗ್ಗೆ ಸ್ಪಷ್ಟತೆಯಿಲ್ಲ. ೧,೩೪,೩೧೯ ಜನರು ತಾವು ಯಾವುದೇ ಜಾತಿಗೆ ಸೇರಿದವರಲ್ಲವೆಂದು ಮತ್ತು ೨,೫೩,೯೫೪ ಜನರು ಜಾತಿಯನ್ನು ಬಹಿರಂಗ ಪಡಿಸಲು ನಿರಾಕರಿಸುತ್ತಾರೆಂದು ವರದಿ ಹೇಳಿದೆ. ಹೀಗಿದ್ದಾಗ ಕರಾರುವಕ್ಕಾಗಿ ವರದಿ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುಸ್ಲಿಮರಲ್ಲಿಯೂ ೧೦೧ ಪಂಗಡಗಳಿವೆ. ಕ್ರಿಶ್ಚಯನ್ನರಲ್ಲೂ ಹಲವು ಪಂಗಡಗಳಿವೆ. ಅವುಗಳನ್ನು ಪ್ರತ್ಯೇಕವಾಗಿ ತೋರಿಸದೇ ಒಕ್ಕಲಿಗರ ಹಾಗೂ ಲಿಂಗಾಯಿತರನ್ನು ಉಪ ಪಂಗಡಗಳಾಗಿ ವಿಂಗಡಿಸಿ ಕಡಿಮೆ ಜನಸಂಖ್ಯೆ ತೋರಿಸುವ ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಾದ ಎಂ.ಸಿ.ಪ್ರಕಾಶ್, ಅರುಣಾಕ್ಷಿ ನಾಗರಾಜ್, ಚೇತನ್, ಅಶೋಕ್, ಸತೀಶ್ಕುಮಾರ್ ಇದ್ದರು.
Caste census Vokkaliga society death certificate