ಚಿಕ್ಕಮಗಳೂರು: ಅಕ್ಷಯ ತೃತೀಯ ದಿನವಾದ ಏ.೩೦ ರಂದು ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಇರುವುದರಿಂದ ಬಾಲ್ಯ ವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಏ.೨೬ರೊಳಗೆ ಸಭೆ ಆಯೋಜಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೆಸ್ವಾನ್ನಲ್ಲಿ ಶನಿವಾರ (ಏ.೧೯) ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ನಡೆಸಿದ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಜಿಲ್ಲೆಯ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮಕ್ಕಳ ರಕ್ಷಣಾ ಸಮಿತಿ ಬಗ್ಗೆ ಪರಿಶೀಲನೆ ಮಾಡುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಕಾರ್ಯಕ್ರಮ ಹಾಗೂ ಐ.ಇ.ಸಿ. ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡಿಸುವುದು, ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದರು.
ಎಲ್ಲಾ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಾರ್ಷಿಕವಾಗಿ ಎರಡು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಕಾವಲು ಸಮಿತಿಯನ್ನು ಮಾಸಿಕವಾಗಿ ಆಯೋಜಿಸಿ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಮುಖೇನ ಹಾಗೂ ತಾಲ್ಲೂಕು ಮಟ್ಟದ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿಗಳನ್ನು ಆಯೋಜಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮುಖಾಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಸಮುದಾಯಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಜಾಗೃತಿ ಮೂಡಿಸಲು ತಿಳಿಸಿದ ಅವರು, ಎಸ್.ಹೆಚ್.ಜಿ. (ಮಹಿಳಾ ಸ್ವಸಹಾಯ ಗುಂಪುಗಳು) ಮುಖಾಂತರ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Instructions to hold a meeting on banning child marriage by April 26