ಚಿಕ್ಕಮಗಳೂರು: ಜಿಲ್ಲಾ ಜಾಗತಿಕ ಲಿಂಗಾಯಿತ ಮಹಾಸಭಾ ವತಿಯಿಂದ ವಚನ ದರ್ಶನ ಮಿಥ್ಯ-ಸತ್ಯ ಗ್ರಂಥ ಬಿಡುಗಡೆ ಸಮಾರಂಭ ಏ.೨೫ ರಂದು ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ನಗರದ ಹೌಸಿಂಗ್ ಬೋರ್ಡ್ ಕೆ.ಎಂ. ರಸ್ತೆ ನಾಯ್ಡು ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹೆಚ್. ಗಂಗಾಧರಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಬಿಜೆಪಿ, ಆರ್ಎಸ್ಎಸ್ ಸಂಘ ಪರಿವಾರದವರು ವಿಶ್ವಗುರು ಬಸವಣ್ಣನವರ ವಚನಗಳನ್ನು ತಿರುಚಿ ಪುಸ್ತಕ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಬಸವಣ್ಣನವರ ನೈಜ ವಚನಗಳನ್ನೊಳಗೊಂಡ ವಚನ ದರ್ಶನ ಮಿಥ್ಯ-ಸತ್ಯ ಗ್ರಂಥ ಬಿಡುಗಡೆ ಸಮಾರಂಭದ ಮೂಲಕ ಉತ್ತರ ನೀಡಲು ಮುಂದಾಗಿದ್ದೇವೆ ಎಂದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಧ್ವಜಾರೋಹಣವನ್ನು ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆಂದು ಹೇಳಿದರು.
ಸಾನಿಧ್ಯವನ್ನು ಚಿಕ್ಕಮಗಳೂರು ಕಲ್ಯಾಣ ನಗರದ ಬಸವತತ್ವ ಪೀಠದ ಡಾ. ಶ್ರೀ ಬಸವಮರುಳಸಿದ್ಧ ಸ್ವಾಮಿಗಳು ಹಾಗೂ ಕಡೂರು ಶ್ರೀ ಯಳನಾಡು ಮಹಾಸಂಸ್ಥಾನದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆಂದು ಹೇಳಿದರು.
ಉದ್ಘಾಟನೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ನೆರವೇರಿಸುವರು. ಅಧ್ಯಕ್ಷತೆಯನ್ನು ರಾಜ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಉಪಾಧ್ಯಕ್ಷರು ಹಾಗೂ ನಿವೃತ್ತ ನ್ಯಾಯಾಧೀಶರಾದ ಕೆಂಪನಗೌಡ್ರು ವಹಿಸಲಿದ್ದು, ಪ್ರಾಸ್ತಾವಿಕವಾಗಿ ತಾವು ಮಾತನಾಡುವುದಾಗಿ ತಿಳಿಸಿದರು.
ಮೈಸೂರಿನ ಜಿಲ್ಲಾ ಜಾಗತಿಕ ಮಹಾಸಭಾದ ಅಧ್ಯಕ್ಷ ಮಹದೇವಪ್ಪ ಆಶಯ ನುಡಿಗಳನ್ನಾಡುವರು. ಗ್ರಂಥ ಪರಿಚಯವನ್ನು ಸಾಹಿತಿ ಚಟ್ನಳ್ಳಿ ಮಹೇಶ್ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಜಿ.ಜ.ಲಿಂ.ಮ.ಸಭಾದ ಉಪಾಧ್ಯಕ್ಷ ಎಂ.ಎಸ್. ನಿರಂಜನ್, ಬೆಂಗಳೂರಿನ ಮುಕ್ತಾಕಾಗಲಿ, ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಮ್ಮ ಭಾಗವಹಿಸಲಿದ್ದು, ಕಡೂರಿನ ಅಕ್ಕನ ಬಳಗದ ವತಿಯಿಂದ ವಚನಗಾಯನ ಏರ್ಪಡಿಸಲಾಗಿದೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮುದಾಯದವರು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತರೀಕೆರೆ ತಾಲ್ಲೂಕು ಜಾಗತಿಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಜಿ.ಎಲ್. ಚಂದ್ರಶೇಖರ್, ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಪಿ. ಗಣೇಶ್, ಜಿಲ್ಲಾ ಸಂಚಾಲಕ ಬಿ.ಎನ್. ಸುರೇಶ್ ಉಪಸ್ಥಿತರಿದ್ದರು.
April 25 Vachana Darshan Mithya-Satya Granth Release Ceremony