ಚಿಕ್ಕಮಗಳೂರು: ಇಡೀ ದೇಶವೇ ಕಣ್ಣೀರು ಸುರಿಸುವ ದಿನವಿದು. ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ರಕ್ತದೋಕುಳಿಯೇ ಹರಿದಿದ್ದು, ಹಿಂದುಗಳ ಮಾರಣ ಹೋಮ ನಡೆದಿದೆ. ಕಾಶ್ಮೀರಿ ಉಗ್ರರಿಗೆ ತಕ್ಕ ಪಾಠ ಕಲಿಸಲು ಕೂಡಲೇ ಪಿಓಕೆಯನ್ನು ವಶಪಡಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಎಸ್ ಶೆಟ್ಟಿ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರಿ ಉಗ್ರರು ಹಿಂದೂ ಪ್ರವಾಸಿಗರ ಹೆಸರನ್ನು ಕೇಳಿ ಕೇಳಿ ಕೊಂದಿದ್ದಾರೆ. ಈ ಕೃತ್ಯದ ಹಿಂದೆ ಪಾಕಿಸ್ತಾನದ ಕುತಂತ್ರವು ಇರುವ ಸಾಧ್ಯತೆ ಇದೆ. ಹೀಗಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪಿಓಕೆಯನ್ನು ಭಾರತ ವಶಕ್ಕೆ ಪಡೆಯಬೇಕು ಎಂದರು.
ಕಾಶ್ಮೀರವನ್ನು ಆಜಾದ್ ಕಾಶ್ಮೀರ ಎಂದು ಕರೆಯುತ್ತೇವೆ. ಅದರಂತೆ ಪಿಓಕೆಯನ್ನು ಸಹ ವಶಪಡಿಸಿಕೊಂಡು ಸ್ವತಂತ್ರಗೊಳಿಸಬೇಕು. ಇದರೊಂದಿಗೆ ಭಾರತದಲ್ಲಿ ಅಡಗಿರುವ ಉಗ್ರರ ದಮನ ಮಾಡಬೇಕು. ಆರ್ಟಿಕಲ್ 370 ತೆಗೆದ ಮೇಲೆ ಕಾಶ್ಮೀರ ನಮ್ಮದು ಎಂದು ಹೇಳುವ ಧೈರ್ಯ ಬಂದಿದೆ. ಈ ಕಾರಣಕ್ಕಾಗಿಯೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಹೋಗಲಾರಂಬಿಸಿದ್ದರು. ಇಲ್ಲಿಗೆ ಬರುವ ಪ್ರವಾಸಿಗರನ್ನು ತಡೆಯುವ ನಿಟ್ಟಿನಲ್ಲಿ ಉಗ್ರರು ಈ ಕೃತ್ಯಕ್ಕೆ ಕೈ ಹಾಕಿರುವ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಾಗ ಅಲ್ಲಿನ ಆರ್ಥಿಕತೆಯು ಪ್ರಬಲವಾಗುತ್ತದೆ. ಆಗ ಉಗ್ರ ಚಟುವಟಿಕೆಗಳಿಗೆ ಆಸ್ಪದ ಸಿಗುವುದಿಲ್ಲ. ಈ ಕಾರಣದಿಂದಾಗಿಯೇ ಹಿಂದು ಪ್ರವಾಸಿಗರ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ. ಪಾಕಿಸ್ತಾನ ಹಾಗೂ ನಮ್ಮ ದೇಶದಲ್ಲಿರುವ ಉಗ್ರಸಂಘಟನೆಗಳ ಒಳಸಂಚಿನಿಂದ ಘಟನೆ ನಡೆದಿರಬಹುದು. ಪಾಕಿಸ್ತಾನದ ಉಗ್ರರು ಜಮ್ಮು ಕಾಶ್ಮೀರದಲ್ಲಿ ತಮ್ಮ ಕುಕೃತ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಅನಂತನಾಗ್ ಜಿಲ್ಲೆಯಲ್ಲಿ ನಡೆದಿರುವ ಘಟನೆಗೆ ಸಂಬಂಧಪಟ್ಟಂತೆ ಉಗ್ರರಿಗೆ ತಕ್ಕ ಪಾಠ ಕಲಿಸದೇ ಇದ್ದಲ್ಲಿ ಪಾಕಿಸ್ತಾನಕ್ಕೂ ತಕ್ಕ ಉತ್ತರ ಕೊಟ್ಟಂತಾಗುವುದಿಲ್ಲ. ಹೀಗಾಗಿ ಭಾರತವನ್ನು ಕೆಣಕಿದರೆ ಪಾಕಿಸ್ತಾನದ ಸ್ಥಿತಿ ಏನಾಗುತ್ತದೆ ಎಂಬುದನ್ನು ತೋರಿಸಬೇಕು ಎಂದರು.
ಉಗ್ರರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಏನೇ ನಿರ್ಧಾರ ಕೈಗೊಂಡರು ದೇಶದ ಜನರು ಅವರ ಬೆನ್ನಿಗೆ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಉಗ್ರರ ವಿರುದ್ಧ ಸೂಕ್ತ ಕಾರ್ಯಾಚರಣೆ ನಡೆಸಿ ಮಟ್ಟ ಹಾಕಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 28ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಕೊಪ್ಪ ಮೂಲದವರು. ಕೊಪ್ಪ ತಾಲೂಕು ಹಸಗೋಡು ಗ್ರಾಪಂ ವ್ಯಾಪ್ತಿಯ ಕುಣಿಮಕ್ಕಿ ಮೂಲದ ಮಂಜುನಾಥ್ ಎರಡು ದಶಕದ ಹಿಂದೆ ಶಿವಮೊಗ್ಗ ಹೋಗಿ ನೆಲೆಸಿದ್ದರು. ಉಗ್ರ ದಾಳಿಯಲ್ಲಿ ಮೃತಪಟ್ಟ ಕುಟುಂಬದವರ ಕಣ್ಣೀರಿನ ಭಾಗ ನಾವು ಆಗಿದ್ದೇವೆ. ಶಿವಮೊಗ್ಗದಲ್ಲಿ ನಡೆಯಲಿರುವ ಮಂಜುನಾಥ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದೇನೆ. ಬಳಿಕ ಉಗ್ರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟ ರೂಪಿಸುತ್ತೇವೆ ಎಂದರು
Capture PoK to teach terrorists a lesson