ಚಿಕ್ಕಮಗಳೂರು: ಐದು ದಶಕಗಳ ಕಾಲ ಅನಭಿಷಿಕ್ತ ದೊರೆಯಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ತನ್ನದೇ ಛಾಪು ಉಳಿಸಿ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವವರು ನಟ ಸಾರ್ವಭೌಮ ಡಾ.ರಾಜ್ಕುಮಾರ್ ಅವರದು ಒಂದು ಮಾಸದ ನೆನಪು ಎಂದು ಹಿರಿಯ ಪತ್ರಕರ್ತ, ಸಾಹಿತಿ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು (ಏ.೨೪) ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ನಡೆದ ವರನಟ ಡಾ.ವರನಟ ಡಾ.ರಾಜ್ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕನ್ನಡವನ್ನು ಉಸಿರಾಗಿಸಿಕೊಂಡ ಡಾ.ರಾಜ್ರವರು ಕನ್ನಡಕ್ಕಾಗಿ ಕೊನೆವರೆಗೂ ಬದುಕಿ ಕನ್ನಡದ ಹಿರಿಮೆ-ಗರಿಮೆಯನ್ನು ಗಗನದೆತ್ತರಕ್ಕೆ ಏರಿಸಿದರು. ವರನಟ, ನಟಸಾರ್ವಭೌಮನಾಗಿ ರಂಗಭೂಮಿ ಕಲಾವಿದರಾಗಿದ್ದ ತಂದೆಯವರಿಂದ ಪ್ರಭಾವಿತರಾಗಿ ರಂಗಭೂಮಿಯ ಎಲ್ಲಾ ಕಲಾಪ್ರಕಾರಗಳನ್ನು ಮೈಗೂಡಿಸಿಕೊಂಡು ಚಿತ್ರರಂಗದವರೆಗೂ ಬಂದು ಪರದೆಯ ಮೇಲೆ ವಿಜೃಂಭಿಸಿದವರು ಎಂದು ಬಣ್ಣಿಸಿದರು.
ರಂಗಭೂಮಿಯ ಪ್ರಮುಖ ಆಶಯಗಳಾದ ಸಂಗೀತ, ಸಾಹಿತ್ಯ ಮತ್ತು ಗಾಯನ ಇವೆಲ್ಲವನ್ನು ಮೇಳೈಸಿಕೊಂಡು ಕಲೆಗಾಗಿ ಕಲೆಯಲ್ಲ, ಕಲೆ ಒಂದು ವಿಶಿಷ್ಟ ಗುಣ ಎಂದು ಆರಾಧಿಸಿ ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು ಡಾ. ರಾಜ್ ಎಂದು ಹೇಳಿದರು.
ಪಾತ್ರಗಳಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಂಡು ಪರಕಾಯ ಪ್ರವೇಶ ಮಾಡಿ ಆ ಪಾತ್ರಗಳಿಗೆ ಜೀವ ತುಂಬಿದವರು. ಸಮಾಜಕ್ಕೆ, ನೀತಿ ಸಂದೇಶವನ್ನು ಬೋಧಿಸುವ ಚಿತ್ರಗಳು ಇವರದಾಗಿದ್ದು, ಐತಿಹಾಸಿಕ ಪಾತ್ರಗಳಿಂದ ಹಿಡಿದು ಜೇಮ್ಸ್ಬಾಂಡ್ವರೆಗೆ ತಮ್ಮ ಕಲಾ ನೈಪುಣ್ಯತೆಯನ್ನು ಮೆರೆದವರು ಡಾ.ರಾಜ್. ಭಕ್ತಿ ಪ್ರದಾನ ಚಿತ್ರಗಳಲ್ಲಂತೂ ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿ ತನ್ಮಯತೆಯನ್ನು ಪ್ರದರ್ಶಿಸುತ್ತಿದ್ದವರು. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಸರಳತೆ ಹಾಗೂ ವಿನಯತೆಯ ಸಾಕಾರಮೂರ್ತಿಯಾಗಿದ್ದರು. ವ್ಯಾಸಂಗ ಮಾಡಿರುವುದು ಕೇವಲ ೪ನೇ ತರಗತಿಯವರೆಗಾದರೂ ಯಾವುದೇ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣವನ್ನು ಮೀರಿದ ಭಾಷೆ, ಸಂಭಾಷಣೆಯ ಪ್ರೌಢಿಮೆ ಅವರಿಗಿತ್ತು ಎಂದು ಅವರು ತಿಳಿಸಿದರು.
ತಮ್ಮ ಚಿತ್ರಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಿ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದವರು. ಗಾಯನದಲ್ಲಿ ಕೂಡ ತಮ್ಮ ಸುಮಧುರ ಕಂಠಸಿರಿಯಿಂದ ಶಾಶ್ವತವಾಗಿ ಉಳಿಯುವ ಗೀತೆಗಳನ್ನು ಕನ್ನಡಿಗರಿಗೆ ನೀಡಿದ್ದಾರೆ. ಕನ್ನಡಕ್ಕೋಸ್ಕರವೇ ಜೀವನ ಮುಡಿಪಾಗಿರಿಸಿದ ಡಾ.ರಾಜ್ ಗೋಕಾಕ್ ಚಳುವಳಿಗೆ ಜೀವ ತುಂಬಿ ಸರ್ಕಾರದ ಮನವೊಲಿಸಿ ಗೋಕಾಕ್ ವರದಿ ಜಾರಿಗೆ ಬರುವಂತೆ ಮಾಡಿದದವರು ಎಂದರು.
ಚಿಕ್ಕಮಗಳೂರಿಗೂ ಅವರಿಗೂ ನಿಕಟ ಸಂಬಂಧವಿತ್ತು. ಅವರ ಬಹುತೇಕ ಚಿತ್ರಗಳು ಇಲ್ಲಿನ ನಿಸರ್ಗ ಸೌಂದರ್ಯದ ತಾಣಗಳಲ್ಲಿ ಸಾಕ್ಷಾತ್ಕಾರ, ಪ್ರೇಮದ ಕಾಣಿಕೆ, ಬಂಗಾರದ ಮನುಷ್ಯ, ಇತ್ಯಾದಿ ಚಿತ್ರಗಳ ಚಿತ್ರೀಕರಣವಾಗಿದ್ದವು ಎಂದು ಹೇಳಿದ ಅವರು, ವೀರಪ್ಪನ್ ಅಪಹರಣದಿಂದ ಕುಗ್ಗಿ ಹೋಗಿದ್ದ ಡಾ.ರಾಜ್ ನಂತರದಲ್ಲಿ ಆರು ವರ್ಷ ಬದುಕಿ ೨೦೦೬ ರ ಏ.೧೨ ರಂದು ನಮ್ಮನ್ನು ಅಗಲಿದರು. ಆದರೂ ಕನ್ನಡ ಇರುವವರೆಗೂ ನಮ್ಮ ಮನೆ-ಮನದಲ್ಲಿ ಅವರು ಶಾಶ್ವತವಾಗಿತ್ತಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಡಾ.ರಾಜ್ಕುಮಾರ್ ಅವರು ತಮ್ಮ ವಿಶಿಷ್ಟ ಪಾತ್ರಗಳು ಹಾಗೂ ಅಭಿನಯ ಪ್ರಬುದ್ಧತೆಯಿಂದ ನಮ್ಮನ್ನು ಕಾಡುತ್ತಾರೆ. ಅವರ ಅಭಿನಯವಾಗಲಿ, ಗೀತೆಗಳಾಗಲಿ ಜೀವನಕ್ಕೆ ಹತ್ತಿರವಾಗಿರುತ್ತವೆ. ರಾಜ್ ತಮ್ಮ ಪೌರಾಣಿಕ ಪ್ರಧಾನ ಪಾತ್ರಗಳು ಹಾಗೂ ಸಾಮಾಜಿಕ ಪಾತ್ರಗಳು, ಪ್ರೀತಿಪೂರಕವಾದ ಪಾತ್ರಗಳಿಂದ ಜನಮನದಲ್ಲುಳಿದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಡಾ.ರಾಜ್ಕುಮಾರ್ ಅವರು ಅವರಿಗಿದ್ದ ಗಾನಗಂಧರ್ವ ಬಿರುದಿಗೆ ಪೂರಕವಾಗಿ ಸರಸ್ವತಿಯ ವರಪುತ್ರರೇ ಆಗಿದ್ದರು. ಸಮಾಜಕ್ಕೆ ಆದರ್ಶಪ್ರಾಯರಾಗಿದ್ದ ಅವರಿಗೆ ಸಾಕಷ್ಟು ಬಿರುದುಗಳು ಬಂದಿವೆ. ಅವರ ಚಲನಚಿತ್ರಗಳಲ್ಲಿರುವ ನೈತಿಕತೆಗಳು ನಮಗೆ ಮತ್ತು ನಮ್ಮ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಡಾ.ರಾಜ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರೇಗೌಡ ಮಾತನಾಡಿ, ಡಾ.ರಾಜ್ಕುಮಾರ್ ಅವರ ಸಾಕಷ್ಟು ಚಲನಚಿತ್ರಗಳ ಚಿತ್ರೀಕರಣಗಳು ನಡೆದಿವೆ. ಚಲನಚಿತ್ರ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ದಲಿತ ಸಂಘಟನೆಗಳ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಚಲನಚಿತ್ರಗಳಲ್ಲಿ ಲವ್ನಿಂದ ನೋವಿನವರೆಗೆ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿದವರು. ಯಾವುದೇ ಮಾದಕ ವಸ್ತುಗಳ ಅಭ್ಯಾಸವಿಲ್ಲದವರು. ಮಹಿಳೆಯರನ್ನು ಗೌರವಿಸುವ ಮೌಲ್ಯಗಳು ಅವರ ಚಿತ್ರಗಳಲ್ಲಿರುತ್ತವೆ. ಈ ಎಲ್ಲ ಗುಣ ಲಕ್ಷಣಗಳಿಂದ ತಾವು ಪ್ರೇರಣೆ ಪಡೆದುದಾಗಿ ತಿಳಿಸಿದರು.
ಕನ್ನಡ ಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಡಾ.ರಾಜ್ ಅವರ ಬಗ್ಗೆ ಎಷ್ಟೇ ಮಾತನಾಡಿದರೂ ಅದು ಕಡಿಮೆಯೆ. ಅವರ ಅಭಿನಯವಾಗಲಿ, ಅವರ ಕಂಠಸಿರಿಯಾಗಲಿ ಅನುಪಮವಾದುದು ಎಂದರು. ಕನ್ನಡಸೇನೆ ಮುಖಂಡರಾದ ಹೆಚ್.ಎಸ್.ಲಕ್ಷ್ಮಣ ಮತ್ತಿತರರು ಮಾತನಾಡಿದರು.
ಪತ್ರಕರ್ತ ಪಿ.ರಾಜೇಶ್, ಲೋಕೇಶ್ ಭಕ್ತನಕಟ್ಟೆ ಹಾಗೂ ದೇವರಾಜ್, ಡಾ.ರಾಜ್ ಅವರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟನಾಯಕ ಅವರು ಡಾ.ರಾಜ್ ಅಭಿನಯದ ಚಲನಚಿತ್ರಗಳ ತುಣುಕು ಪ್ರದರ್ಶನಗಳನ್ನು ನೀಡಿ ರಂಜಿಸಿದರು.
ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಗ್ರಂಥಾಲಯಾಧಿಕಾರಿ ಪ್ರಕಾಶ್ ಬೆಳವಾಡಿ ವಂದಿಸಿದರು. ಮುಖಂಡರಾದ ಹೆಚ್.ಪಿ.ಮಂಜೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ, ಡಾ.ರಾಜ್ ಅಭಿಮಾನಿ ಸಂಘದ ಮುಖಂಡರು ಮತ್ತಿತರರು ಕಾರ್ಯಕಮದಲ್ಲಿದ್ದರು.
ಸಮಾರಂಭಕ್ಕೆ ಮುನ್ನ ನಗರ ತಾಲ್ಲೂಕು ಕಚೇರಿಯಿಂದ ಡಾ.ರಾಜ್ ಅಭಿಮಾನಿಗಳ ಸಂಘ ಹಾಗೂ ಕನ್ನಡಪರ ಸಂಘಟನೆಗಳಿಂದ ಡಾ.ರಾಜ್ ಅವರ ಭಾವಚಿತ್ರಗಳ ಸಹಿತ ಕುವೆಂಪು ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು.
Dr. Raj the uncrowned king of Kannada cinema for five decades