ಚಿಕ್ಕಮಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ೨೭ ಮಂದಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಸಂಜೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಸವನಹಳ್ಳಿಯ ಶ್ರೀ ಓಂಕಾರೇಶ್ವರ ಗಣಪತಿ ದೇವಸ್ಥಾನದಿಂದ ಪಾಕ್ ಪ್ರೇರಿತ ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಎಂಜಿ ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಬಾಂಗ್ಲಾದ ನುಸುಳುಕೋರರಿಗೆ ಬೆಂಬಲಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಭಯೋತ್ಪಾದsಕರ ಪ್ರತಿಕೃತಿಯನ್ನೂ ಮೆರವಣಿಗೆ ಮಾಡಿ, ಅವುಗಳನ್ನು ಪಾಕಿಸ್ಥಾನದ ಧ್ವಜವನ್ನೂ ಸೇರಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಆಜಾದ್ ಮೈದಾನದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಅಮಾಯಕ ಹಿಂದೂ ಪ್ರವಾಸಿಗರನ್ನೇ ಹುಡುಕಿ ಕೊಂದಿರುವ ಭಯೋತ್ಪಾದಕರನ್ನು ಬೇರು ಸಹಿತ ಕಿತ್ತು ಹಾಕಬೇಕು. ಇದಕ್ಕಾಗಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಯಿತು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಹಿಂದೂಗಳನ್ನು ಕಾಫೀರರು ಎಂದು ಕರೆಯುವವರೇ ನಿಜವಾದ ರಾಕ್ಷಸರು. ಅವರೇ ಪಾಪಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಸ್ಲಾಮಿಕ್ ಹೆಸರಿನಲ್ಲಿ ಭಯೋತ್ಪಾದನೆ ಮಾಡುತ್ತಿರುವ ಎಲ್ಲರನ್ನೂ ಕೇಂದ್ರ ಸರ್ಕಾರ ಧ್ವಂಸ ಮಾಡಬೇಕು. ಭಯೋತ್ಪಾದನೆ ವಿರುದ್ಧ ಮಾತನಾಡಲು ಯಾವ ಮುಸ್ಲಿಮರಿಗೂ ಧೈರ್ಯವಿಲ್ಲ. ಎಲ್ಲರೂ ನಮ್ಮ ದೇಶದ ಕಾನೂನಿಗೆ ತಲೆಬಾಗಬೇಕು. ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಒಪ್ಪಿಕೊಳ್ಳಬೇಕು ಆಗ ಮಾತ್ರ ಜಗತ್ತು ಉಳಿಯುತ್ತದೆ. ಹಿಂದೂ ಉಳಿದರೆ ಮಾತ್ರ ಜಗತ್ತು ಉಳಿದೀತು ಎಂದರು.
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ಬಾಂಗ್ಲಾದೇಶಿಗರು ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಕುಮ್ಮಕ್ಕು ನೀಡುತ್ತಿದ್ದಾರೆ. ಬಾಂಗ್ಲಾ ನುಸುಳುಕೋರರಿಗೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಬಳಸಿಕೊಂಡು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಾರ್ಯಾರು ಭಯೋತ್ಪಾದಕ ದಾಳಿಗಳನ್ನು ಮಾಡುತ್ತಿದ್ದಾರೆ ಅವರಿಗೆಲ್ಲ ಧರ್ಮ ಇದೆ. ಭಯೋತ್ಪಾದಕರಿಗೆ ಧರ್ಮವಿಲ್ಲ ಎನ್ನುವುದೆಲ್ಲಾ ಸುಳ್ಳು. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣಿಗಳಿಗೆ ನಾಚಿಕೆ ಆಗಬೇಕು. ನಿಮ್ಮ ರಾಜಕೀಯ ಲಾಭಕ್ಕಾಗಿ ಹಿಂದೂಗಳ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು.
ರೀತಿ ಧಕ್ಕೆ ತಂದ ಸಂದರ್ಭದಲ್ಲೆಲ್ಲಾ ಹಿಂದೂಗಳ ಪರವಾಗಿ ವಿಶ್ವಹಿಂದೂ ಪರಿಷತ್-ಬಜರಂಗದಳ ರಕ್ಷಣೆಗೆ ನಿಂತಿದೆ. ಮುಂದೆಯೂ ನಿಲ್ಲುತ್ತದೆ ಎಂದರು.
ವಿಶ್ವಹಿಂದೂ ಪರಿಷತ್ ಮುಖಂಡ ದಿವಾಕರ ಭಟ್ ಮಾತನಾಡಿ, ಭಯೋತ್ಪಾದಕರ ವಿರುದ್ಧ ಎಲ್ಲಾ ಹಿಂದೂಗಳು ಒಟ್ಟಾಗಿ ಎದ್ದು ನಿಲ್ಲಬೇಕಿದೆ. ಜಾಗೃತರಾಗಿದ್ದರೆ ಮಾತ್ರ ಬದುಕಲು ಸಾಧ್ಯ. ಹಿಂದೂ ಎದ್ದರೆ, ದೇಶ ಎದ್ದೀತು ಎಂದರು.
ಅಕ್ಕಪಕ್ಕದಲ್ಲೇ ಇರುವ ಶತ್ರುಗಳಿದ್ದಾರೆ. ಅದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ನಮ್ಮವರೊಂದಿಗೆ ನಾವು ವ್ಯವಹರಿಸುವ, ಐಕ್ಯತೆಯಿಂದಿರಬೇಕು ಎನ್ನುವುದು ನಮ್ಮ ಸಿದ್ಧಾಂತ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಪ್ರದೀಪ್, ಅಮಿತ್, ಸಂತೋಷ್ ಕೋಟ್ಯಾನ್, ಶ್ಯಾಂ ವಿ ಗೌಡ, ಕೋಟೆ ರಂಗನಾಥ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ಮಧುಕುಮಾರ ರಾಜ್ ಅರಸ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Vishwa Hindu Parishad-Bajrang Dal hold massive protest condemning killing of tourists