ಚಿಕ್ಕಮಗಳೂರು: ಈಶ್ವರಹಳ್ಳಿ, ಸಿಂಧಿಗೆರೆ ಮತ್ತು ಕಳಸಾಪುರ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೪.೯ ಕೋಟಿ ರೂ.ಗಳ ಅನುದಾನದಲ್ಲಿ ದೇವಸ್ಥಾನ, ಸಮುದಾಯ ಭವನ, ಕಾಂಕ್ರ್ರೀಟ್ ರಸ್ತೆ, ಚರಂಡಿ ಮುಂತಾದ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕು ಬಸವನಕೋಡಿ ಸರ್ಕಾರಿ ಶಾಲೆಯಲ್ಲಿ ಇಂದು ನಡೆದ ಈಶ್ವರಹಳ್ಳಿ ಕಳಸಾಪುರ ಮತ್ತು ಸಿಂದಿಗೆರೆ ಗ್ರಾಮ ಪಂಚಾಯಿತಿಗಳ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಬಡವರ ಪರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ. ಈ ಭಾಗದ ಸುಮಾರು ಒಂದು ಸಾವಿರ ಜನರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲ ಎನ್ನುವ ಮಾಹಿತಿ ಇದೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಅಂಥ ಪ್ರಕರಣಗಳು ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿ ಈ ಯೋಜನೆಯ ಹಣ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜನರ ಸಮಸ್ಯೆ ಪರಿಹರಿಸುವಲ್ಲಿ ಜನಸಂಪರ್ಕ ಸಭೆ ಸಹಕಾರಿಯಾಗಲಿದೆ. ಜನಸಾಮಾನ್ಯರಿಗೆ ಜನಸಂಪರ್ಕ ಸಭೆಯ ಸದುಪಯೋಗ ಆಗಬೇಕು ಎಂದರೆ ಸರ್ಕಾರ ಬಡವರು, ದೀನದಲಿತರು, ಹಾಗೂ ಮಹಿಳೆಯರನ್ನು ಮುನ್ನೆಲೆಗೆ ತರುವ ಸಲುವಾಗಿ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ನಮ್ಮ ವ್ಯವಸ್ಥೆಯಲ್ಲಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಅದರಲ್ಲೂ ಶಾಸಕಾಂಗ ಮತ್ತು ಕಾರ್ಯಾಂಗ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಮಾತ್ರ ಸರ್ಕಾರದ ಆಶಯಗಳು, ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತವೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರ ಸಮೀಪವೇ ಹೋಗಿ ಅವರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ನೀಡಬೇಕೆನ್ನುವ ಕಾರಣಕ್ಕಾಗಿಯೇ ಆರಂಭವಾದ ಪರಿಕಲ್ಪನೆ ಜನಸಂಪರ್ಕ ಸಭೆ ಎಂದರು.
ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಕಲ್ಯಾಣ ಯೋಜನೆ, ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ಖಾತೆ ಮಾಡಿಸುವುದು, ಬಿ.ಪಿ.ಎಲ್. ಕಾರ್ಡ್ ವಿತರಣೆ ಇನ್ನು ಮುಂತಾದ ಸಮಸ್ಯೆಗಳನ್ನು ಆಲಿಸಿ ಆಯಾ ಅಧಿಕಾರಿಗಳಿಂದ ಆ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಈ ಸಭೆಗಳ ಮುಖಾಂತರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಈಶ್ವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ, ಸಿಂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ನಟೇಶ್ ಬಗರ್ ಹುಕುಂ ಸದಸ್ಯ ಕೆಂಗೇಗೌಡ ತಹಸೀಲ್ದಾರ್ ರೇಷ್ಮಾ ತಾಲಕ್, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Public relations meeting held today at Basavanakodi Government School