ಚಿಕ್ಕಮಗಳೂರು: ಶ್ರಮಿಕರ ನೆರವಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಧಾವಿಸುವ ಮೂಲಕ ಹಮಾಲಿ ಕಾರ್ಮಿಕರಿಗೆ ಸವಲತ್ತು ನೀಡಿ ನೆರವಾಗಬೇಕೆಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಹಮಾಲಿ ಕಾರ್ಮಿಕರಿಗೆ ಶುಭಾಶಯ ಕೋರಿ ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ಹಾಗೂ ಅಸಂಘಟಿತ ವಲಯ ಕಾರ್ಮಿಕರಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸವಲತ್ತುಗಳನ್ನು ವಿತರಿಸುತ್ತಿದ್ದು, ಆದರೆ, ಹಮಾಲಿ ಕಾರ್ಮಿಕರು ಕಾರ್ಮಿಕ ಇಲಾಖೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವುದು ವಿಷಾಧನೀಯ. ರಾಜ್ಯಮಟ್ಟದಲ್ಲಿ ಈ ಸಮಸ್ಯೆ ಬಗ್ಗೆ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹಮಾಲಿ ಕಾರ್ಮಿಕರ ಸಂಘ ಪ್ರಾರಂಭದಿಂದ ಇದೂವರೆಗೆ ನಡೆದುಬಂದ ದಾರಿಯ ಬಗ್ಗೆ ಸ್ಮರಿಸಿದ ಶಾಸಕರು, ಕಳೆದ ೩೫ ವರ್ಷಗಳಿಂದ ಕಾರ್ಮಿಕರ ಸಂಪರ್ಕದಲ್ಲಿದ್ದೇನೆ, ಹಮಾಲಿ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಲು ಸರ್ಕಾರದಲ್ಲಿ ಚರ್ಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಹಮಾಲಿ ಕಾರ್ಮಿಕರ ಸಂಘ ಸಮುದಾಯ ಭವನ ನಿರ್ಮಾಣದ ಬಗ್ಗೆ ಬೇಡಿಕೆ ಇಟ್ಟಿದ್ದು, ಇನ್ನು ಒಂದು ವಾರದಲ್ಲಿ ಇದಕ್ಕೆ ನಿವೇಶನ ಗುರುತಿಸುವುದರ ಜೊತೆಗೆ ದಾಖಲೆಗಳನ್ನು ಸಿದ್ದಪಡಿಸಿದ ಬಳಿಕ ಸರ್ಕಾರದಲ್ಲಿ ಅನುದಾನ ತಂದು ತಮ್ಮ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.
ಹಮಾಲಿ ಕಾರ್ಮಿಕರು ಕಷ್ಟಪಟ್ಟು ದುಡಿದ ಹಣವನ್ನು ಅಪವ್ಯಯ ಮಾಡದೇ ಜೀವವಿಮೆಯಲ್ಲಿ ಕಡ್ಡಾಯವಾಗಿ ತೊಡಗಿಸಿಕೊಂಡು ಕುಟುಂಬದ ರಕ್ಷಣೆಗೆ ಮುಂದಾಗಬೇಕು ಜೊತೆಗೆ ಉಳಿತಾಯದ ಹಣವನ್ನು ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವ ಮೂಲಕ ಅವರನ್ನು ಸಮಾಜದ ಮುನ್ನಲೆಗೆ ತರಬೇಕೆಂದು ಸಲಹೆ ನೀಡಿದರು.
ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಹೀಮ್ ಕಾಕಾ ಮಾತನಾಡಿ, ಸಂಘದಲ್ಲಿ ೨೫೦ ಜನ ಸದಸ್ಯರಿದ್ದು, ಕಾರ್ಮಿಕರಿಗೆ ನಿವೇಶನ, ಮನೆ, ಸಮುದಾಯ ಭವನ ನಿರ್ಮಾಣ ಮಾಡಲು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಮಾಲಿ ಕಾರ್ಮಿಕರಿಗೆ ಸಿಗುತ್ತಿಲ್ಲ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಹಮಾಲಿ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಎಸ್. ಮಂಜು, ಖಜಾಂಚಿ ಗುರುಮೂರ್ತಿ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
೩೩ನೇ ವಾರ್ಷಿಕೋತ್ಸವ ಹಾಗೂ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘದಿಂದ ಬೈಕ್ ಜಾಥಾ ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಿಂದ ಪ್ರಾರಂಭಗೊಂಡು ಐ.ಜಿ ರಸ್ತೆ ಮೂಲಕ ಸಂತೆಮೈದಾನದಲ್ಲಿರುವ ತಮಿಳು ಕಾಲೋನಿಯ ಸಂಘದ ಕಚೇರಿಯಲ್ಲಿ ಮುಕ್ತಾಯಗೊಂಡಿತು.
Government assistance to porter workers