ಚಿಕ್ಕಮಗಳೂರು: ನಗರಸಭೆ ವತಿಯಿಂದ ನಗರದಲ್ಲಿ ನಿರ್ಮಿಸಲಾಗಿರುವ ಮಳಿಗೆಗಳನ್ನು ಸಾರ್ವಜನಿಕರು ಹರಾಜು ಪ್ರಕ್ರಿಯೆ ಮೂಲಕ ಪಡೆದುಕೊಂಡಿದ್ದು, ಮಳಿಗೆಯನ್ನು ಒಳಬಾಡಿಗೆಗೆ ನೀಡದೇ ಸರ್ಕಾರದ ಆದೇಶದಂತೆ ಸ್ವಂತ ಜೀವನ ನಿರ್ವಹಣೆಗೆ ಮಾತ್ರ ಬಳಸಬೇಕೆಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.
ಅವರು ಇಂದು ಕೆ.ಎಂ ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಹತ್ತಿರ ಹೊಸದಾಗಿ ನಿರ್ಮಿಸಿರುವ ಮಳಿಗೆಗಳು ಮತ್ತು ಡಾ. ಬಿ.ಆರ್. ರಸ್ತೆ ಹಾಗೂ ಕೆ.ಎಂ ರಸ್ತೆಯಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಹರಾಜಿನಲ್ಲಿ ಪಡೆದುಕೊಂಡಿರುವುದನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ಹರಾಜು ಮಾಡಲಾಗುವುದು. ನಾಳೆ (ಮೇ.೭) ರಂದು ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಫುಡ್ಕೋರ್ಟ್ನ ಆಹಾರ ಮಳಿಗೆಗಳನ್ನು ಹರಾಜಿನಲ್ಲಿ ಭಾಗವಹಿಸಿ ಪಡೆಯಬಹುದಾಗಿದೆ ಎಂದರು.
ಹಾಲಿ ೪೮ ಜನ ಬೀದಿಬದಿ ವ್ಯಾಪಾರಿಗಳ ಪಟ್ಟಿ ಮಾಡಲಾಗಿದ್ದು, ಅವರು ಹರಾಜಿನಲ್ಲಿ ಭಾಗವಹಿಸದಿದ್ದರೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು, ತಾವು ಪೌರಾಯುಕ್ತರು ಸಭೆ ನಡೆಸಿ ಚರ್ಚಿಸಿ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಆಸಕ್ತರು ಬಂದು ಮಳಿಗೆ ಹರಾಜಿನಲ್ಲಿ ಭಾಗವಹಿಸಿ ಆಹಾರ ಮಳಿಗೆ ಪಡೆದುಕೊಂಡು ತಮ್ಮ ಉತ್ತಮ ಜೀವನ ನಿರ್ವಹಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಮಳಿಗೆಗಳ ಬಾಡಿಗೆಯನ್ನು ಸರಿಯಾಗಿ ಪಾವತಿಸದೇ ಇರುವವರು ನಗರಸಭೆಗೆ ಮುಂಗಡವಾಗಿ ಪಾವತಿಸಿರುವ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಿದ್ದು, ಅಂತಹವರ ಮಳಿಗೆಯನ್ನು ಮರು ಹರಾಜು ಮಾಡಿ ಅರ್ಹರಿಗೆ ಕೊಡುತ್ತೇವೆ ಎಂದು ತಿಳಿಸಿದರು.
ಪೌರಾಯುಕ್ತ ಬಿ.ಸಿ. ಬಸವರಾಜು ಮಾತನಾಡಿ, ವಿವಿಧ ಬಡಾವಣೆಗಳ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ಇಂದು ನಡೆಸಲಾಗಿದ್ದು, ಕೆ.ಎಂ. ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಬಳಿ ನಿರ್ಮಿಸಿರುವ ೩೨ ಮಳಿಗೆಗಳ ಪೈಕಿ ೩ ಮಳಿಗೆಗಳು ಮಾತ್ರ ಹರಾಜಿನಲ್ಲಿ ತೆಗೆದುಕೊಂಡಿದ್ದು, ಇನ್ನೂ ೨೯ ಮಳಿಗೆಗಳು ಇವೆ. ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ ಎಂದರು.
ನಿರೀಕ್ಷೆಗೂ ಮೀರಿ ಹರಾಜಿನಲ್ಲಿ ಬಿಡ್ ಮಾಡಲಾಗಿದ್ದು, ಆದರೆ ಪ್ರತೀ ತಿಂಗಳು ಬಾಡಿಗೆ ಸರಿಯಾಗಿ ಪಾವತಿಸಬೇಕು, ಅವಶ್ಯಕತೆ ಇರುವ ವ್ಯಾಪಾರಿಗಳು ಮಳಿಗೆ ಪಡೆದರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಳಿಗೆಯನ್ನು ಪಡೆಯುವಂತೆ ಮನವಿ ಮಾಡಿದರು.
ನಾಳೆ (ಮೇ.೭) ರಂದು ಆಜಾದ್ ವೃತ್ತದ ಜಿಮ್ ಕಟ್ಟಡದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಹರಾಜು ಮಾಡಲಾಗುವುದು. ಬೇಲೂರು ರಸ್ತೆ ಬೀದಿಬದಿ ವ್ಯಾಪಾರಸ್ತರಿಗೆ ಅನುಕೂಲವಾಗುವಂತೆ ಫುಡ್ಕೋರ್ಟ್ನಲ್ಲಿ ಆಹಾರ ಮಳಿಗೆ ನಿರ್ಮಿಸಿದ್ದು, ಈ ಮಳಿಗೆಗಳ ಹರಾಜು ಸಹ ಅಂದು ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಫುಡ್ಕೋರ್ಟ್ನಲ್ಲಿ ಮಳಿಗೆ ಪಡೆದವರು ಒಳ ಬಾಡಿಗೆ ನೀಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ನಗರಸಭೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಿ ಮಳಿಗೆಯಿಂದ ಹೊರಹಾಕುವುದಾಗಿ ಎಚ್ಚರಿಸಿದರು.
Municipal store auction – should be used for own living expenses