ಚಿಕ್ಕಮಗಳೂರು: ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್ನಿಂದ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಲೈನ್ ಅಳವಡಿಕೆ ಮತ್ತು ವಿತರಣಾ ಕೇಂದ್ರದ ಯೋಜನೆಯನ್ನು ವಿರೋಧಿಸಿ ಆಣೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಸಭೆ ನಿರ್ಣಯ ಕೈಗೊಂಡಿದ್ದು, ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಸಬೇಕು ಎಂದು ಆಗ್ರಹಿಸಿದೆ.
ಇಂದು ಆಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಭವನದಲ್ಲಿ ಸಭೆಸೇರಿದ ಬೆಳೆಗಾರರು ಯೋಜನೆಯಿಂದಾಗುವ ಪರಿಸರ ಹಾನಿ ಹಾಗೂ ರೈತರು ಬೆಳೆಗಾರರಿಗಾಗಿರುವ ಅನ್ಯಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ವಸ್ತಾರೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್ ಮಾತನಾಡಿ, ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ಲೈನ್ ಅಳವಡಿಕೆಯಿಂದಾಗುವ ತೊಂದರೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದೇವೆ. ಈ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಎಂಬುದನ್ನು ತಿಳಿಸಿದ್ದೇವೆ ಎಂದರು.
ಸುಮಾರು ೧೩ ರಿಂದ ೧೪ ಕಿ.ಮೀ.ನಷ್ಟು ಲೈನ್ ಅಳವಡಿಸಬೇಕಾಗುತ್ತದೆ. ಬಹಳಷ್ಟು ಜನರ ಜಮೀನು ಹೋಗುತ್ತದೆ. ಲಕ್ಷಾಂತರ ಮರಗಳು ನಾಶವಾಗುತ್ತವೆ. ಅಡಿಕೆ ತೋಟಗಳಿಗೆ ಹಾನಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯಕ್ಕೆ ಹಾನಿಯುಂಟಾಗುತ್ತದೆ. ಇದಾವುದನ್ನೂ ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಇದರ ಗುತ್ತಿಗೆದಾರರು ಯಾರೆಂದು ನಮಗೆ ಈವರೆಗೆ ಗೊತ್ತಿಲ್ಲ. ರೌಡಿಗಳ ರೀತಿ ದೌರ್ಜನ್ಯ ಮಾಡಿ ಕಾಮಗಾರಿ ನಡೆಸುವುದಕ್ಕೆ ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯನ್ನು ಸ್ಥಗಿತಗೊಳಿಸಿ ಚಿಕ್ಕಮಗಳೂರಿನಿಂದ ಅಳವಡಿಸಲಾಗುತ್ತಿರುವ ಎಕ್ಸ್ಪ್ರೆಸ್ಲೈನ್ ಮೂಲಕವೇ ವಿದ್ಯುತ್ ಪೂರೈಸಲು ಸಲಹೆ ಮಾಡಿದ್ದೆವಾದರೂ ಪರಿಗಣಿಸಿಲ್ಲ ಎಂದು ಹೇಳಿದರು.
ಆಲ್ದೂರು-ಮಲ್ಲಂದೂರು ಮಾರ್ಗದಲ್ಲಿ ಮುತ್ತೋಡಿ ವನ್ಯಜೀವಿ ಅರಣ್ಯ ಬರುತ್ತದೆ ಅಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಜಕ್ಕನಹಳ್ಳಿ ವರೆಗೆ ಕ್ಲಿಯರೆನ್ಸ್ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ ಬಫರ್ಝೋನ್ ಬರುತ್ತದೆ. ಅಲ್ಲದೆ ಕಾಫಿಬೋರ್ಡ್, ತೋಟಗಾರಿಕೆ ಇಲಾಖೆ ಯಾವುದರಿಂದಲೂ ಕ್ಲಿಯರೆನ್ಸ್ ಪಡೆದಿಲ್ಲ ಇದರ ಜೊತೆಗೆ ಬೆಳೆಗಾರರು, ನಿವಾಸಿಗಳ ವಿರೋಧವೂ ಇದೆ. ಕೆಲವು ಬೆಳೆಗಾರರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇಷ್ಟಾದರೂ ದಬ್ಬಾಳಿಕೆ ಮಾಡಿ, ಕೆಲವು ಕಡೆ ಗುಂಡಿ ತೆಗೆದು ಗೂಂಡಾಗಿರಿ ಮಾಡುವ ರೀತಿ ವರ್ತಿಸುತ್ತಿರುವುದನ್ನು ಖಂಡಿಸಿದರು.
ಈ ಬಾರಿ ಉತ್ತಮ ಮಳೆ ಬಂದಿದೆ. ಕಾಫಿಗೆ ಉತ್ತಮ ಬೆಲೆ ಇದೆ. ಇಂತಹ ಸಂದರ್ಭದಲ್ಲಿ ಎಷ್ಟು ಜಮೀನು ಹೋಗುತ್ತದೆ. ಅದಕ್ಕೆ ಎಷ್ಟು ಬೆಲೆ ನಿಗಧಿಪಡಿಸಬೇಕು ಎನ್ನುವ ಯಾವ ಮಾಹಿತಿ ಇಲ್ಲದೆ ಕಾಮಗಾರಿ ಮಾಡಲಾಗುತ್ತಿದೆ. ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ನಮ್ಮ ಮೇಲೆ ದೌರ್ಜನ್ಯ ಮಾಡಿ ಯೋಜನೆ ಮಾಡಲು ಮುಂದಾದರೆ ನಮ್ಮ ಪ್ರಾಣ ಹೋದರೂ ಅವಕಾಶ ಕೊಡುವುದಿಲ್ಲ. ಪವರ್ಲೈನ್ ಮಾಡಲು ಸರ್ವೇ ಮಾಡಿರುವುದೇ ಸರಿಯಲ್ಲ. ಈ ಭಾಗದಲ್ಲಿ ತರಲು ನಮ್ಮ ವಿರೋಧವಿದೆ. ಚಿಕ್ಕಮಗಳೂರಿನಿಂದ ಲೈನ್ ತರಲಿ, ಇಲ್ಲವಾದರೆ ಭೂಮಿಯೊಳಗೆ ಕೇಬಲ್ ಹಾಕಿ ತರಲಿ ಯೋಜನೆಗೆ ನಾವು ವಿರೋಧಿಗಳಲ್ಲ ಎಂದು ಹೇಳಿದರು.
ಆಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಪಿರಾಜೇಂದ್ರ ಮಾತನಾಡಿ, ಈ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಿದ್ದೆವು. ಕೆಪಿಟಿಸಿಎಲ್ ಆಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ರೀತಿ ಸ್ಪಂದಿಸದ ಹಿನ್ನೆಲೆಯಲ್ಲಿ ೯ ಮಂದಿ ಬೆಳೆಗಾರರು ಹೈಕೋರ್ಟ್ನಿಂದ ಯಥಾಸ್ಥಿತಿ ಆದೇಶ ತಂದಿದ್ದೇವೆ. ಮತ್ತೆ ಅಹವಾಲು ಆಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ ಎಂದು ತಿಳಿಸಿದರು.
ಭೂಮಿಯೊಳಗೆ ಕೇಬಲ್ ಕೊಂಡೊಯ್ಯುವುದು ಹಾಗೂ ಎಕ್ಸ್ಪ್ರೆಸ್ ಲೈನನ್ನು ಅಭಿವೃದ್ಧಿಪಡಿಸಬಾರದೇಕೆ ಎಂದು ನ್ಯಾಯಾಲಯ ಮೌಖಿಕವಾಗಿ ಪ್ರಶ್ನಿಸಿರುವುದರಿಂದ ಜಿಲ್ಲಾಧಿಕಾರಿಗಳು ಆಲ್ದೂರು-ಮಲ್ಲಂದೂರು ವಿದ್ಯುತ್ ಲೈನ್ಅನ್ನು ಕೈಬಿಟ್ಟು ಭೂಮಿಯೊಳಗಿನಿಂದ ಅಥವಾ ಹಾಲಿ ಇರುವ ಎಕ್ಸ್ಪ್ರೆಸ್ ಲೈನ್ನನ್ನೇ ಅಭಿವೃದ್ಧಿಪಡಿಸಿ ಸಂಪರ್ಕ ಕೊಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಗ್ರಾ.ಪಂ.ಮಾಜಿ ಸದಸ್ಯ ತಿಮ್ಮಯ್ಯ ಮಾತನಾಡಿ, ನನಗಿರುವುದು ಅರ್ಧ ಎಕರೆ ಜಮೀನು ಮಾತ್ರ ಅದು ಈಗ ಆಲ್ದೂರು-ಮಲ್ಲಂದೂರು ವಿದ್ಯುತ್ಲೈನ್ ಯೋಜನೆಗೆ ಹೋಗುತ್ತಿದೆ ಎಂದು ಮಾಹಿತಿ ಇದೆ. ಈ ಬಗ್ಗೆ ಸಾಕಷ್ಟು ವಿರೋಧಿಸಿ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದೇವೆ. ಹೋರಾಟ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿ ಸಂಭವಿಸುವುದರಿಂದ ಪರಿಸರ ವಾದಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಣೂರು ನಟರಾಜ್, ಕಟ್ರುಮನೆ ಮಂಜುನಾಥ್, ಚಂದನ್ ಆಶೋಕ್, ಸಾರ್ಥಕ್ ಮಾಗರಹಳ್ಳಿ, ಮಲ್ಲಂದೂರು ಪುಟ್ಟೇಗೌಡ, ತಳಿಹಳ್ಳ ಮಲ್ಲೇಶ್, ಪೂರ್ಣೇಶ್ ಕುಡುವಳ್ಳಿ, ಬ್ಯಾರವಳ್ಳಿ ಲಕ್ಷ್ಮಣ್, ಕಟ್ರುಮನೆ ರಘುನಾಥ್, ನಾರಾಯಣ್, ರಾಷ್ಟ್ರಿತ್,
Opposition to power line distribution center project