ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ಶ್ರೀಮತಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಗಳನ್ನು ಗುರುವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು.
ಇದೇ ವೇಳೆ ಲಲಿತಾ ಕಲಾಮಂಟಪದಲ್ಲಿ ನಡೆದ ಗ್ರಾಮೀಣಾಭಿವೃದ್ದಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕನ್ನಡದಲ್ಲಿ ಮಾತು ಆರಂಭಿಸಿ, `ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ’ ಎಂದು ಅಚ್ಚರಿ ಮೂಡಿಸಿದರು.
ಶ್ರೀಕ್ಷೇತ್ರದಲ್ಲಿ ಜಿ.ಭೀಮೇಶ್ವರ ಜೋಷಿಯವರ ಅಜ್ಜ ದಿ.ಡಿ.ಬಿ.ವೆಂಕಸುಬ್ಬಾ ಜೋಯಿಸ್ ಮತ್ತು ಅವರ ಧರ್ಮಪತ್ನಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಪ್ರತಿಮೆ ಲೋಕಾರ್ಪಣೆ ಮಾಡುವ ಭಾಗ್ಯ ನನ್ನದಾಗಿದೆ. ಅವರ ವ್ಯಕ್ತಿತ್ವ ಮತ್ತು ಕಾಲಜ್ಞಾನದ ಬಗ್ಗೆ ಪುಸ್ತಕದಲ್ಲಿ ಪ್ರಕಟವಾಗಿದೆ. ಬಿ.ಎಲ್.ಶಂಕರ್ ಅವರ ವಿವರಣೆ ಕೇಳಿ ತಾವು ಪುಳಕಗೊಂಡಿದ್ದು ಪುತ್ಥಳಿ ಅನಾವರಣಗೊಳಿಸುವ ಭಾಗ್ಯ ನನಗೆ ದೊರಕಿದ್ದು ಒಂದು ದೊಡ್ಡ ಪುಣ್ಯ ಎಂದರು.
ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ. ಭದ್ರಾ ನದಿಯ ತಟದಲ್ಲಿರುವ ಶ್ರೀಕ್ಷೇತ್ರ, ಭವ್ಯ ದಿವ್ಯ ತೀರ್ಥ ಸ್ಥಳ. ಹೊರನಾಡಿನ ಪುಣ್ಯಭೂಮಿಯಲ್ಲಿ ಮಾತೆಯ ಆಶೀರ್ವಾದ ಪಡೆದಿರುವುದು ನನ್ನ ಪುಣ್ಯ, ನಮ್ಮ ಭಾರತ ದೇಶ ವಿವಿಧ ರೀತಿಯ ಸಂಸ್ಕೃತಿಯನ್ನು ಹೊಂದಿದೆ. ಆದಿಗುರು ಶಂಕರಾಚಾರ್ಯರು ಜನಿಸಿದ ನಾಡು ಇದಾಗಿದ್ದು, ಭಾರತದ ಸನಾತನ ಸಂಸ್ಕೃತಿಯನ್ನು ಹೊಂದಿದೆ. ಸನಾತನ ಧರ್ಮ ಹಾಗೂ ಸಾಧು ಪರಂಪರೆಯ ದೇಶ ನಮ್ಮದು. ಶ್ರೀಕ್ಷೇತ್ರದ ಧರ್ಮಕರ್ತರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪುಣ್ಯ ಕ್ಷೇತ್ರಗಳು ಹೇಗಿರಬೇಕೆಂಬುವುದನ್ನು ನಿರೂಪಿಸಿದ್ದಾರೆ. ಮಂದಿರಗಳು ಬರೀ ಪೂಜಾ ಕೇಂದ್ರಗಳು ಮಾತ್ರವಾಗಿರದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ನ ಅಧ್ಯಕ್ಷ ಬಿ.ಎಲ್.ಶಂಕರ್ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಅವರಿಗೆ ನುಡಿ ನಮನ ಸಲ್ಲಿಸಿ, ಇಲ್ಲಿನ ತಪಸ್ಸಿನ ಫಲದ ಕಾರಣ ಇಂದು ಈ ದೇವಾಲಯ ಹತ್ತು ಹಲವಾರು ಜನೋಪಯೋಗಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿದೆ. ಇಡೀ ನಾಡಿಗೆ ಅನ್ನ ಕೊಡುವ ದೇವಿ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೆಶ್ವರಿ ಅಮ್ಮನವರು.
ವೆಂಟಸುಬ್ಬಾ ಜೋಯಿಸ್ ಅಪಾರ ಪಾಂಡಿತ್ಯವನ್ನು ಪಡೆದಿದ್ದ್ದ ಒಬ್ಬ ಕಾಲಜ್ಞಾನಿಯಾಗಿದ್ದರು. ಆರ್ಯುವೇದ ಪಂಡಿತರಾಗಿದ್ದರಲ್ಲದೆ, ಸಾಂಸ್ಕೃತಿಕ ಲೋಕದ ಬಗ್ಗೆ ಕಾಳಜಿ ಹೊಂದಿದ್ದರು. ಅಂದಿನ ಕಾಲದಲ್ಲೇ ಅನ್ನದಾಸೋಹ ಪ್ರಾರಂಭಿಸಿದ್ದು, ಅದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಹರಿಹರ ಪೀಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಂನ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ `ಶ್ರೀ ಅನ್ನಪೂರ್ಣ ಪಾದಸೇವಾ ದುರಂಧರ’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಕುಟುಂಬ ಪಿತೃಋಣ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಐದು ಋಣಗಳಿವೆ. ಅದರಲ್ಲಿ ಮೊದಲನೆಯದೇ ಪಿತ್ರೃಋಣ, ವೆಂಕಟಸುಬ್ಬಾ ಜೋಯಿಸ್ ಅವರು ಐದನೆಯ ಧರ್ಮಕರ್ತರಾಗಿ ಶ್ರೀಕ್ಷೇತ್ರ ಎಂದರೆ ಏನು ಎಂಬುವುದನ್ನು ನಿರೂಪಿಸಿದ್ದಾರೆ. ಅಂದಿನ ಕಾಲದಲ್ಲಿ ಶಾಲಾ ಮಕ್ಕಳಿಗೆ ಅನ್ನದಾಸೋಹದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಯೊಬ್ಬರಿಗೂ ಜೀವನ ಎಂದರೆ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ನೆನಪಿಸುವ ನಿಟ್ಟಿನಲ್ಲಿ ಜಿ.ಭೀಮೇಶ್ವರ ಜೋಷಿ ತಮ್ಮ ಅಜ್ಜ-ಅಜ್ಜಿಯ ಪುತ್ಥಳಿಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಜ್ಜ ಜೋಯಿಸ್ ದಂಪತಿಗಳು ತಮ್ಮ ಸರ್ವಸ್ವವನ್ನು ಮುಡುಪಿಟ್ಟು, ಉನ್ನತ ಜೀವನ ನಡೆಸಿದ ದಂಪತಿಗಳ ಪುತ್ಥಳಿಯನ್ನು ಇಂದು ಅನಾವರಣ ಮಾಡುವ ಒಂದು ಅವಕಾಶ ತಮಗೆ ದೊರಕಿದೆ. ಅವರು ಹಾಕಿ ಕೊಟ್ಟ ಪಥದಲ್ಲಿ ಸಾಗುತ್ತಾ ಮುನ್ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸೇನೆಗಾಗಿ ಕ್ಷೇತ್ರದ ವತಿಯಿಂದ ೧೦ ಲಕ್ಷ ರೂ.ಗಳ ಚೆಕ್ಕನ್ನು ನೀಡಿದರು.
ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಉಚಿತ ಹೆಂಚುಗಳ ವಿತರಣೆ, ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪತ್ರ ವಿತರಣೆ, ಕೃಷಿ ಸಮೃದ್ದಿ ಯೋಜನೆಯಲ್ಲಿ ಕೃಷಿ ಉಪಕರಣಗಳ ವಿತರಣೆ, ಮಹಿಳಾಭಿವೃದ್ದಿ ಯೋಜನೆಯಡಿಯಲ್ಲಿ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವೆ ಮೋಟಮ್ಮ, ರಾಜಲಕ್ಷ್ಮೀ ಭೀ.ಜೋಷಿ, ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ರಾಮನಾರಾಯಣ್ ಜೋಷಿ ಸ್ವಾಗತಿಸಿ, ರಾಜಗೋಪಾಲ್ ಜೋಷಿ ವಂದಿಸಿದರು,
Governor unveils bronze statue in Horanadu