ಚಿಕ್ಕಮಗಳೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದು, ಇದರಲ್ಲಿ ಭಾರತ ಜಯಗಳಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಅವರು ಇಂದು ಪಿಳ್ಳೇನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷ ಪಿ.ಡಿ. ನವೀನ್ರವರಿಗೆ ಅಭಿನಂದಿಸಿ ಮಾತನಾಡಿ ನಾವು ಇಲ್ಲಿ ಗೆಲ್ಲುವುದು ಮುಖ್ಯವಾದರೆ ಅದಕ್ಕಿಂತ ಮುಖ್ಯವಾಗಿ ಭಾರತ ದೇಶ ಗೆಲ್ಲಬೇಕು. ಆ ಗೆಲುವಿಗೆ ಪೂರಕವಾಗಿ ಇಲ್ಲಿರುವ ಎಲ್ಲಾ ಗ್ರಾ.ಪಂ ಸದಸ್ಯರ ವಿಶ್ವಾಸ ಪಡೆದು ದೇಶ ಮುಖ್ಯ ಎಂದುಕೊಂಡು ಜನರ ವೈಯಕ್ತಿಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾಗುವುದು ಎಷ್ಟು ಮುಖ್ಯವೋ ಅಷ್ಟೇ ಒಳ್ಳೆಯ ಹೆಸರು ಗಳಿಸಿ ಕೆಲಸ ಮಾಡುವುದು ಮುಖ್ಯ. ಜನಪ್ರತಿನಿಧಿಗಳಾದ ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಬೇಕೆಂದು ಕರೆನೀಡಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಪಿಳ್ಳೇನಹಳ್ಳಿ ರಮೇಶ್ ಮಾತನಾಡಿ, ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ನವೀನ್ರವರಿಗೆ ಅಭಿನಂದಿಸಿದ ಅವರು, ನೂತನ ಅಧ್ಯಕ್ಷರು ಸಿಕ್ಕಿರುವ ತಮ್ಮ ಅಧಿಕಾರವಧಿಯಲ್ಲಿ ಗ್ರಾ.ಪಂ ಅಭಿವೃದ್ಧಿಗೆ ಹಾಗೂ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲಿ ಎಂದು ಹಾರೈಸಿದರು.
ನೂತನ ಅಧ್ಯಕ್ಷ ಪಿ.ಡಿ. ನವೀನ್ ಮಾತನಾಡಿ, ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಮಾಡಿದ ಪಕ್ಷದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಈಗ ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಆದ್ಯತೆ ಮೇಲೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಿಳ್ಳೇನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರುಗಳಾದ ಪಿ.ಎನ್. ರಮೇಶ್, ಮಹೇಶ್ವರಾಚಾರ್, ಬಿ.ಹೆಚ್. ಶಶಿಧರ, ನಾಗರಾಜ ನಾಯ್ಕ, ಭಾಗ್ಯ, ಪವಿತ್ರ, ಸಾವಿತ್ರಮ್ಮ, ಸೌಂದರ್ಯ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣಾಧಿಕಾರಿಯಾಗಿ ಕಡೂರು ಪಶುವೈದ್ಯಕೀಯ ಇಲಾಖೆಯ ಉಮೇಶ್, ಪಿಡಿಓ ನರಸಿಂಹಮೂರ್ತಿ ಭಾಗವಹಿಸಿದ್ದರು.
P.D. Naveen elected unopposed as new president of Pillenahalli Gram Panchayat