ಚಿಕ್ಕಮಗಳೂರು: ಪ್ರತಿಯೊಬ್ಬರಲ್ಲಿ ಪರಿಸರ ಉಳಿಸುವ ಬಗ್ಗೆ ಕಾಳಜಿ ಸ್ವಚ್ಚತೆ ಮೂಲಕ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಕರೆ ನೀಡಿದರು.
ಅವರು ಇಂದು ನಗರಸಭೆ ಆವರಣದಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ತಾಯಿ ಹೆಸರಿನಲ್ಲಿ ಒಂದು ಗಿಡ ಶೀರ್ಷಿಕೆ ಅಡಿಯಲ್ಲಿ ಸಸಿ ನಡುವ ಕಾರ್ಯಕ್ರಮ ಹಾಗೂ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ ಕುರಿತು ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದರು.
ಜಿಲ್ಲೆ ಪರಿಸರದ ಮಡಿಲಾಗಿದ್ದು ದಟ್ಟ ಅರಣ್ಯ ನದಿ ಮೂಲಗಳನ್ನು ಹೊಂದಿರುವ ಪ್ರವಾಸೋದ್ಯಮಕ್ಕೆ ಪೂರಕವಾದ ವಿಶೇಷ ಜಿಲ್ಲೆಯಾಗಿದ್ದು, ಪರಿಸರ ಉಳಿದರೆ ಆರೋಗ್ಯವಂತ ಜೀವ ಸಂಕುಲಗಳು ಸಮೃದ್ಧಿ ಜೀವನಕ್ಕೆ ನಾಂದಿಯಾಗುತ್ತದೆ ಎಂದರು.
ಮನೆಗೊಂದು ಮಗು ಮಗುವಿಗೊಂದು ಮರ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಯೊಬ್ಬರು ಮನೆಗೊಂದು ಮರ ನೆಟ್ಟು ಪೋಷಿಸಿದರೆ ಒಳ್ಳೆಯ ಗಾಳಿ, ಹಣ್ಣು, ಹೂವು ಕೊಡುತ್ತದೆ ಈ ನಿಟ್ಟಿನಲ್ಲಿ ಪರಿಸರ ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಭೂಮಿ ನಮ್ಮ ನೆಲ ಅಭಿಯಾನ ಆರಂಭಿಸಿ ಮಣ್ಣಿನಲ್ಲಿ ಇರುವ ಖನಿಜ ಅಂಶವನ್ನು ಉಳಿಸಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.
ಪಕ್ಷಿಗಳಿಗೆ ಆಹಾರವಾಗಲು ನೆರವಾಗುವಂತೆ ನಗರಸಭೆ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ನಗರದೆಲ್ಲೆಡೆ ಇರುವ ಪಾರ್ಕ್ಗಳಲ್ಲಿ ಗಿಡ ನೆಡುವ ಅಭಿಯಾನ ಆರಂಭಿಸಲು ಗುರಿ ಹೊಂದಲಾಗಿದೆ ಎಂದರು.
ಚಿಕ್ಕ ಚಾಕ್ಲೇಟ್ ಕವರ್ನಿಂದ ಪ್ರಾರಂಭವಾಗಿ ದೊಡ್ಡ-ದೊಡ್ಡ ಬಾಟೆಲ್, ಕೈ ಚೀಲಗಳು ಬಳಸುತ್ತಿದ್ದು ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ವಿಷಾಧಿಸಿದ ಅವರು ಇದನ್ನು ಮನೆಗಳಲ್ಲಿಯೇ ನಿಯಂತ್ರಿಸಿದಾಗ ಮಾತ್ರ ಪರಿಸರ ಉಳಿಸಲು ಸಾದ್ಯ ಎಂದರು.
ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತ್ ಯೋಜನೆಯಡಿ ಪರಿಸರಕ್ಕೆ ಪೂರಕವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದು ಈ ಮೂಲಕ ಕೆರೆ, ಕಟ್ಟೆ, ನದಿ, ಕಲ್ಯಾಣಿ ಸ್ವಚ್ಚತೆಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಪ್ರಸಕ್ತ ವರ್ಷದಿಂದ ಮನೆಗೊಂದು ಮರ ನೆಡಬೇಕೆಂಬ ಗುರಿಯನ್ನು ಹೊಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಯೋಜನೆ ಜಾರಿಮಾಡಿದೆ, ನಗರಸಭೆಯ ಪಾರ್ಕ್ ಅಭಿವೃದ್ಧಿಗೆ ೧೦ ಲಕ್ಷರ ರೂ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಪರಿಸರ ಉಳಿದರೆ ಜನರ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ, ಕಾಲ-ಕಾಲಕ್ಕೆ ಮಳೆ ಬರುವುದರಿಂದ ಪ್ರಕೃತಿ ಅಸಮತೋಲನವಾಗುವುದು ತಪ್ಪುತ್ತದೆ ಎಂಬುವುದನ್ನು ಸರ್ಕಾರಗಳು ಮನಗಂಡಿವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಪರಮೇಶ್, ಪ್ರಸಾದ್ ಅಮೀನ್, ಡೇನಲ್ಮ್ ಯೋಜನೆಯ ಸಿಎಓ ಕಲಾವತಿ, ಜಿಲ್ಲಾ ನೂಡಲ್ ಅಧಿಕಾರಿ ಶಿವಲಿಂಗಯ್ಯ, ಸಿಓ ಚಂದ್ರಶೇಖರ್, ಲೆಕ್ಕ ಅಧೀಕ್ಷಕರು ಲತಾಮಣಿ, ಅಮೃತ್ ಮಿತ್ರ ಯೋಜನೆಯ ನೋಡಲ್ ಅಧಿಕಾರಿ ತೇಜಸ್ವಿನಿ ಇಂಜಿನಿಯರ್ಗಳಾದ ಲೋಕೇಶ್, ಸೌಜನ್ಯ, ಮತ್ತಿತರರು ಉಪಸ್ಥಿತರಿದ್ದರು.
It is necessary to create awareness in saving the environment.