ಚಿಕ್ಕಮಗಳೂರು: ಆಡಳಿತ ವೈಫಲ್ಯದಿಂದ ಆರ್ಸಿಬಿ ಕ್ರಿಕೆಟ್ ಅಭಿಮಾನಿಗಳ ಧಾರುಣ ಸಾವಿಗೆ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಿಂದ ಸಿಎಂ ಮತ್ತು ಡಿಸಿಎಂ ವಿರುದ್ಧ ಧಿಕ್ಕಾರ ಕೂಗುತ್ತಾ ಆಗಮಿಸಿದ ಕಾರ್ಯಕರ್ತರು ಸಿಎಂ ಮತ್ತು ಡಿಸಿಎಂ ಭಾವಚಿತ್ರಕ್ಕೆ ಬೆಂಕಿಹಚ್ಚಿ ಆಕ್ರೋಶ ಹೊರಹಾಕಿದರು. ಬಳಿಕ ಸಾವಿಗೀಡಾದ ಕ್ರೀಡಾಭಿಮಾನಿಗಳ ಆತ್ಮಕ್ಕೆ ಶಾಂತಿಗಾಗಿ ಕಾರ್ಯಕರ್ತರು ಒಂದು ನಿಮಿಷ ಮೌನಾಚರಣೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಆರ್ಸಿಬಿ ವಿಜಯೋತ್ಸವದಲ್ಲಿ ರಾಜ್ಯಸರ್ಕಾರ ಸೂಕ್ತ ಬಂದೋಬಸ್ತ್ ಮಾಡದೇ ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿರುವ ಪರಿಣಾಮ ೧೧ ಮಂದಿ ಕ್ರೀಡಾಭಿಮಾನಿಗಳು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳು ನೋವಿನ ಸಾಗರದಲ್ಲಿ ಮುಳುಗಲು ರಾಜ್ಯಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಕುಂಭಮೇಳದ ಬಗ್ಗೆ ಟೀಕಿಸುವ ಮುಖ್ಯಮಂತ್ರಿಗಳು ರಾಜಧಾನಿಯಲ್ಲಿ ಗುಪ್ತಚರ ಮಾಹಿತಿಗಳಿದ್ದರೂ ಸಮಾರಂಭ ನಡೆಸಿದ್ದಾರೆ. ಈ ಪ್ರಕರಣದಿಂದ ನುಚುಚಿಕೊಳ್ಳಲು ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಲು ಮುಂದಾಗಿರುವುದು ನಾಚಿಕೇಡಿನ ಸಂಗತಿ ಎಂದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೊಟ್ಯಾನ್ ಮಾತನಾಡಿ, ಕ್ರೀಡಾಭಿಮಾನಿಗಳ ಸಾವು ಮುಚ್ಚಿಹಾಕಲು ಸಿಬಿಐ, ನ್ಯಾಯಾಧೀಶರ ತನಿಖೆಗೆ ಒಳಪಡಿಸುತ್ತೇವೆಂದು ಬೂಟಾಟಿಕೆ ಮಾಡಿಕೊಂಡಿರುವ ರಾಜ್ಯಸರ್ಕಾರ ಕೊನೆಯದಾಗಿ ಯಾವುದೇ ದಾರಿ ತೋಚದೆ ನೇರವಾಗಿ ರಾಜ್ಯದ ನಿಷ್ಟಾವಂತ ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಿ ಕೈತೊಳೆದುಕೊಳ್ಳುತ್ತಿದೆ ಎಂದು ದೂರಿದರು.
ದೇಶದಲ್ಲಿ ಕರ್ನಾಟಕ ಪೊಲೀಸರಿಗೆ ವಿಶೇಷ ಸ್ಥಾನಮಾನವಿದೆ. ಆದರೆ ರಾಜ್ಯದ ಸಿಎಂ ಮತ್ತು ಡಿಸಿಎಂ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಸರ್ಕಾರ ಮಾಡಿದ ತಪ್ಪನ್ನು ಪೊಲೀಸರ ಮೇಲೆ ಹೊರಿಸುತ್ತಿರುವುದು ನ್ಯಾಯಸಮ್ಮತವಲ್ಲ ಎಂದರು.
ಈ ಮೊದಲೇ ಗುಪ್ತಚರ ಇಲಾಖೆ ಸಮಾರಂಭ ನಡೆಸದಂತೆ ಮಾಹಿತಿ ರವಾನಿಸಿದ್ದರೂ ಲೆಕ್ಕಿ ಸದೇ ವಿಜಯೋತ್ಸವ ಆಚರಿಸಿ ಅಮಾಯಕರ ಸಾವಿಗೆ ಸರ್ಕಾರವೇ ಕಾರಣವಾಗಿದೆ ಎಂದು ದೂರಿದರು.
ಅಂದಿನ ವಿಜಯೋತ್ಸವ ಸಮಾರಂಭವು ಜನಸಾಮಾನ್ಯರಿಗಲ್ಲ. ಸಚಿವರು ಮತ್ತು ಶಾಸಕರ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬದವರನ್ನು ಒಲೈಸಲು ಹಾಗೂ ಸೆಲ್ಪಿ ಪೋಟೋ ಕಿಕ್ಲಿಸಿಕೊಳ್ಳಲು ಎಂಬುದು ವೇದಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಈ ಸಾವಿಗೆ ಕಾರಣರಾದ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್, ಕೌಶಿಕ್, ಜಿಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಮುಖಂಡರಾದ ಕೋಟೆ ರಂಗನಾಥ್, ದಿನೇಶ್, ಈಶ್ವರಹಳ್ಳಿ ಮಹೇಶ್, ನೆಟ್ಟೆಕೆರೆಹಳ್ಳಿ ಜಯಣ್ಣ, ಸಚಿನ್ಗೌಡ, ಕೆ.ಸಿ.ನಿಶಾಂತ್, ಕೋಟೆ ಪ್ರದೀಪ್, ಸತೀಶ್, ಪ್ರದೀಪ್, ರೇವನಾಥ್, ಜೀವನ್, ಪವಿತ್ರ, ಬೆನಡಿಕ್ಟ್ ಜೇಮ್ಸ್, ಸಂಗೀತ ಮತ್ತಿತರರಿದ್ದರು.
BJP protests demanding resignation of CM-DCM