ಚಿಕ್ಕಮಗಳೂರು: ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಆನಂದದಿಂದ ಕಳೆಯಬೇಕು. ಹಾಗೆಯೇ ಅವರು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯ ಶ್ರೀಮತಿ ಸುಂದರಮ್ಮ ಶಂಕರಮೂರ್ತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಹಾಗೂ ವೃತ್ತಿ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವರನ್ನು ದುಡಿಮೆಗೆ ಹಚ್ಚಿದಲ್ಲಿ ಅವರ ಬಾಲ್ಯವನ್ನು ಕಸಿದುಕೊಂಡಂತಾಗುತ್ತದೆ ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಕಾಯ್ದೆ ೧೯೮೬ ರಲ್ಲಿ ಜಾರಿಗೆ ಬಂದಿತು. ಅನಂತರ ೨೦೧೬ರಲ್ಲಿ ಆ ಕಾಯ್ದೆ ತಿದ್ದುಪಡಿಯಾದ ಬಳಿಕ ೧೪ ರಿಂದ ೧೮ರ ವಯೋಮಾನದವರನ್ನು ಕೂಡ ಬಾಲಕಾರ್ಮಿಕರೆಂದು ಪರಿಗಣಿಸಲಾಯಿತು. ಮಕ್ಕಳು ಅದರಲ್ಲೂ ೫ ರಿಂದ ೧೪ ವರ್ಷದ ಒಳಗಿನವರು ಕಡ್ಡಾಯವಾಗಿ ಶಿಕ್ಷಣಕ್ಕೆ ಒಳಪಡಬೇಕು. ಶಿಕ್ಷಣ ಅವರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು.
ಹಲವಾರು ಕಾರಣಕ್ಕಾಗಿ ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿರುವ ನಿದರ್ಶನಗಳು ಕಂಡು ಬಂದಿವೆ. ಮಕ್ಕಳನ್ನು ದುಡಿಸಿಕೊಳ್ಳುವ ಸಂದರ್ಭ ಅವರು ವಯಸ್ಕರಂತೆ ಕನಿಷ್ಠ ವೇತನ ಕಾಯ್ದೆಯ ಅನ್ವಯ ಬೇಡಿಕೆ ಮುಂದಿಡುವುದಿಲ್ಲ. ಅವರಿಂದ ಕಡಿಮೆ ವೇತನಕ್ಕೆ ಹೆಚ್ಚು ದುಡಿಸಿಕೊಳ್ಳಲು ಅವಕಾಶವಿದೆ. ಹಾಗೆಯೇ ಬೋನಸ್ ಹಾಗೂ ವಿಶ್ರಾಂತಿಯ ಬೇಡಿಕೆ ಸಹ ಅವರಿಂದ ಬರುವುದಿಲ್ಲ. ಬಡತನ, ನಿರುದ್ಯೋಗ, ಅನಕ್ಷರತೆ ಬಾಲಕಾರ್ಮಿಕ ಪದ್ಧತಿಗೆ ಕಾರಣವಾಗಿದೆ. ಅನೇಕ ಸಂದರ್ಭಗಳಲ್ಲಿ ಶಿಕ್ಷಣ ಕೊಡಿಸುವ ಸಾಮರ್ಥ್ಯವಿಲ್ಲದೆ, ಪಾಲಕರೇ ಮಕ್ಕಳನ್ನು ದುಡಿಮೆಗೆ ಹಚ್ಚಿರುವ ನಿದರ್ಶನಗಳಿವೆ. ಅವರ ದುಡಿಮೆಯಿಂದ ಕುಟುಂಬದ ಆರ್ಥಿಕ ಸ್ಥಿತಿಗೆ ಅನುಕೂಲವಾಗಬಹುದು ಎನ್ನುವುದೇ ಇದಕ್ಕೆ ಕಾರಣ ಎಂದರು.
ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆ ಮಾಡಿದ ಬಳಿಕ ಅಂಥ ವಿದ್ಯಾರ್ಥಿಗಳಿಗೆ ವಯಸ್ಸಿಗೆ ಅನುಗುಣವಾಗಿ ಶಾಲೆಗೆ ಸೇರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಈ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ರಕ್ಷಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಎಸ್ಸಿಪಿ ಹಾಗೂ ಟಿಎಸ್ಪಿ ಮೊತ್ತದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ನೆರವನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಮಾತ್ರ ಜಾಗೃತಿ ಕೈಗೊಂಡರೆ ಸಾಲದು. ಸಾರ್ವಜನಿಕರು ಸಹ ಕೈಜೋಡಿಸಬೇಕು. ಸಾರ್ವಜನಿಕರು ಕೈಜೋಡಿಸದ ಹೊರತು ಯಾವ ಯೋಜನೆಗಳು ಕೂಡ ಫಲಪ್ರದವಾಗುವುದಿಲ್ಲ ಎಂದು ಹೇಳಿದರು.
ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂಥವರಿಗೆ ೬ ತಿಂಗಳಿಂದ ೨ ವರ್ಷ ಜೈಲು ಹಾಗೂ ೨೦ ರಿಂದ ೫೦ ಸಾವಿರ ರೂ.ಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ತಂದೆ, ತಾಯಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಉಪ ಕಾರ್ಯದರ್ಶಿ ಶಂಕರ ಕೊರವರ ಮಾತನಾಡಿ, ಮಕ್ಕಳು ತಮ್ಮ ಬಾಲ್ಯ ಜೀವನವನ್ನು ಸುಗಮವಾಗಿ ಕಳೆದು ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ತಡೆಯಲು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಡಿವೈಎಸ್ಪಿ ಶೈಲೇಂದ್ರ, ಸಮಾಜ ಕಲ್ಯಾಣ ಅಧಿಕಾರಿ ರೇವಣ್ಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ರಮೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಮತ್ತಿತರ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.
Children should not be deprived of education for any reason