ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಸಮಸಮಾಜ ನಿರ್ಮಾಣ ಹಾಗೂ ಸರ್ವ ಜನಾಂಗದ ಎಲ್ಲಾ ಶೋಷಿತರು ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಟಿಬದ್ಧವಾಗಿದ್ದು ಈ ತಳಹದಿಯ ಮೇಲೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಖಂಡರು, ಕಾರ್ಯಕರ್ತರು ಮುಂದಾಗಬೇಕೆಂದು ವೈದ್ಯಕೀಯ ಶಿಕ್ಷಣ ಕೌಶಲ್ಯ ಇಲಾಖೆ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಕರೆ ನೀಡಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿ ಕಳೆದ ೨ ವರ್ಷಗಳಿಂದ ರಾಜ್ಯ ಸರ್ಕಾರ ಜನಪರ, ಜನಹಿತವಾಗಿ ಆಡಳಿತ ನಡೆಸುತ್ತಿದ್ದು ಈ ಬಗ್ಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ವಿಪಕ್ಷಗಳ ಆರೋಪಕ್ಕೆ ಉತ್ತರ ನೀಡಬೇಕೆಂದು ತಿಳಿಸಿದರು.
ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಪಂಚಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶ್ರಮಿಸಿ ನುಡಿದಂತೆ ನೆಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪದೆಪದೇ ಟೀಕೆ ಮಾಡುತ್ತಿದೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು, ಆದರೆ ಸರ್ಕಾರ ಇದನ್ನೂ ಮೀರಿ ಯಶಸ್ವಿಯಾಗಿ ಎರಡೂವರೆ ವರ್ಷ ಪೂರೈಸಿದೆ ಎಂದರು.
ವೈದ್ಯಕೀಯ ಇಲಾಖೆಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪ್ರಗತಿ ಸಾಧಿಸಿದ್ದೇವೆ ಮೆಡಿಕಲ್ ಕಾಲೇಜು, ಜಿಲ್ಲಾ ಆಸ್ಪತ್ರೆಗಳಲ್ಲಿ ಗುಣಮಟ್ಟದ ಉತ್ತಮ ಚಿಕಿತ್ಸೆ ಸಾರ್ವಜನಿಕರಿಗೆ ದೊರೆಯಬೇಕೆಂಬುದು ಪ್ರಮುಖ ಉದ್ದೇಶ ಮತ್ತು ಗುರಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣಗೊಂಡಿದ್ದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ೮ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ, ಇದು ಲೋಕಾರ್ಪಣೆಯಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಜನಹಿತ-ಜನಪರವಾಗಿ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಆದರೆ ಇದನ್ನು ಸಹಿಸದ ವಿರೋಧ ಪಕ್ಷಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿರುವುದರಿಂದ ಸಾಮಾಜಿಕ ಗಲಭೆ ಸೃಷ್ಠಿಯಾಗಿ ಸಮಾಜ-ಸಮಾಜದ ಮಧ್ಯೆ ವಿಷ ಬೀಜ ಬಿತ್ತಿ ಅಶಾಂತಿ ಮೂಡಿಸುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾಜದಲ್ಲಿರುವ ದುರ್ಬಲರಿಗೆ ಶಕ್ತಿ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ, ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ೫ ಶಾಸಕರು ಗೆಲ್ಲುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎಂದು ಶ್ಲಾಘಿಸಿದರು.
ಚಿಕ್ಕಮಗಳೂರು, ಶಿವಮೊಗ್ಗ, ಕಾರವಾರ, ಮಂಗಳೂರು, ಉಡುಪಿ ಈ ೫ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಬೇರೂರಬೇಕೆಂಬುದೆ ನಮ್ಮ ಸದಾಶಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಮಾತನಾಡಿ ರಾಜ್ಯದಲ್ಲಿ ಜನಪರ ಆಡಳಿತವನ್ನು ಯಶಸ್ವಿಯಾಗಿ ೨ ವರ್ಷ ಪೂರೈಸಿರುವ ರಾಜ್ಯ ಸರ್ಕಾರ ಭರವಸೆಗಳನ್ನು ಮನೆಗೆ ಮುಟ್ಟಿಸುವಲ್ಲಿ ಸಾಕಾರಗೊಂಡಿದೆ ಎಂದರು.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ನೇತೃತ್ವದಲ್ಲಿ ೫ ಶಾಸಕರು ಜವಾಬ್ದಾರಿಯಿಂದ ಕ್ರಿಯಾಶೀಲವಾಗಿ ಸರ್ಕಾರದ ಜನಪರ ಕಾರ್ಯಗಳನ್ನು ಜನರ ಮನೆ ಭಾಗಿಲಿಗೆ ತಲುಪಿಸುವಲ್ಲಿ ಸಹಕರಿಸಿದ್ದಾರೆ ಎಂದು ಹೇಳಿದರು.
ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದ ಅವರು ಪಕ್ಷಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಕಾರ್ಯಕರ್ತರು, ಮುಖಂಡರು ಒತ್ತು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಶಿವಾನಂದಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಲ್ ವಿಜಯ್ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಪಿ ಮಂಜೇಗೌಡ, ಸೇವಾದಳದ ಅಧ್ಯಕ್ಷ ಬಸವರಾಜ್, ನಗರ ಕಾಂಗ್ರೆಸ್ ಅಧ್ಯಕ್ಷ ತನುಜ್ಕುಮಾರ್ ನಾಯ್ಡ್, ಮಲ್ಲೇಶ್ ಸ್ವಾಮಿ, ಅತೀಕ್ ಖೈಸರ್ ಮತ್ತಿತರರು ಉಪಸ್ಥಿತರಿದ್ದರು.
Convince the people of the pro-people achievements of the Congress government.