ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನಿವೃತ್ತ ಎಲ್ಲಾ ಇಪಿಎಸ್ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ೭೫೦೦ ರೂ ಪಿಂಚಣಿ ಹಾಗೂ ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಆಗ್ರಹಿಸಿದರು.
ಅವರು ಇಂದು ನಗರದಲ್ಲಿ ನೂತನ ಎನ್ಎಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ನಿವೃತ್ತ ನೌಕರರಿಗೆ ಡಿಎ, ವಿಧವೆಯರಿಗೆ ಶೇ.೧೦ ರಷ್ಟು ಪಿಂಚಣಿ ಕೊಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿ ಇಪಿಎಸ್ ಕಾರ್ಮಿಕರು ಭವಿಷ್ಯ ನಿಧಿಯಲ್ಲಿ ಹಣ ತೊಡಗಿಸಿದ್ದು, ಈ ಹಣದಿಂದಲೇ ಪಿಂಚಣಿ ಕೊಡಬಹುದಾಗಿದೆ, ೯೦ ಸಾವಿರ ಕೋಟಿ ರೂ ಬಡ್ಡಿ ಬರುತ್ತಿದೆ ಎಂದು ಮಾಹಿತಿ ನೀಡಿದರು.
೬೮ ಸಾವಿರ ಪಿಂಚಣಿದಾರರಿಗೆ ೭೫೦೦ ರೂ ಮಾಸಿಕ ಪಿಂಚಣಿ ಕೊಡಬಹುದು. ಈ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಂದಿಟ್ಟು ರಾಷ್ಟ್ರಾಧ್ಯಂತ ಪ್ರವಾಸ ಕೈಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎನ್ಎಸಿ ಘಟಕಗಳನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.
ಭಾರತದ ೫೪೩ ಸಂಸದರನ್ನು ಈಗಾಗಲೇ ಭೇಟಿಮಾಡಿ, ಸಂಸತ್ನಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರನ್ನು ಆಯ್ಕೆಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ಇಪಿಎಸ್ ನೌಕರರ ಪಾತ್ರ ಅತೀ ಮುಖ್ಯ ಎಂದರು.
ಇದೂವರೆಗೆ ರಾಜ್ಯದ ೨೮ ಸಂಸದರುಗಳು ನಮ್ಮ ಪರವಾಗಿ ಧ್ವನಿ ಎತ್ತಿಲ್ಲ ಎಂದು ದೂರಿದ ಅವರು ಕನಿಷ್ಟ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇದೇ ಜೂ.೧೭ ರಂದು ರಾಜ್ಯದ ಎನ್ಎಸಿ ಕಾರ್ಯಕಾರಿ ಸಭೆಯನ್ನು ಕರೆಯಲಾಗಿದ್ದು, ಸಂಘಟನೆಯ ಸರ್ವ ಸದಸ್ಯರು ಸಂಘಟಿತರಾಗಿ ಭಾಗವಹಿಸುವ ಮೂಲಕ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಎನ್ಎಸಿ ಸಂಘಟನೆಯ ಮೂಲ ಉದ್ದೇಶ ಇಪಿಎಸ್ ನೌಕರರಿಗೆ ಹಲವು ಬೇಡಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘಟನೆಯ ರಾಷ್ಟ್ರಾಧ್ಯಕ್ಷ ರಮಾಕಾಂತ್ ನರಗುಂದ, ಅಶೋಕ್ ರಾವತ್, ಸಿಂಗ್ ಇವರುಗಳ ನೇತೃತ್ವದಲ್ಲಿ ೩೪ ರಾಜ್ಯಗಳಲ್ಲಿ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡುತ್ತಿದ್ದೇವೆಂದು ಹೇಳಿದರು.
ಎನ್ಎಸಿ ಕಾರ್ಯಾಧ್ಯಕ್ಷ ಹಾಗೂ ಉಪಾಧ್ಯಕ್ಷ ವಿ.ಕೆ. ಗಡಾದ ಮಾತನಾಡಿ, ೧೯೫೨ ರಲ್ಲಿ ಭವಿಷ್ಯ ನಿಧಿ ಜಾರಿಮಾಡಿದರು, ೧೯೭೨ ರಲ್ಲಿ ಕುಟುಂಬ ಪಿಂಚಣಿ ಯೋಜನೆಯನ್ನು ಜಾರಿಮಾಡಿದರು. ೧೯೯೫ ರಲ್ಲಿ ಇಪಿಎಸ್-೯೫ ಪಿಂಚಣಿ ಯೋಜನೆ ಜಾರಿಗೆ ತಂದರು. ಇದನ್ನು ಜಾರಿಮಾಡಿದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರಸರ್ಕಾರ ಹೆಚ್ಚಿನ ಪಿಂಚಣಿ ನೀಡುತ್ತದೆ ಎಂದು ಹೇಳಿದ್ದರು ಎಂದರು.
ಆದರೆ, ಟ್ರೇಡ್ ಯೂನಿಯನ್ ಮುಖಂಡರು ಈ ಹೇಳಿಕೆ ಬಗ್ಗೆ ಕ್ರಮವಹಿಸದೆ ಉದಾಸೀನ ತಾಳಿದ ಹಿನ್ನೆಲೆಯಲ್ಲಿ ಇಂದು ನಾವುಗಳೆಲ್ಲರೂ ನಮ್ಮ ಬೇಡಿಕೆಗಳಿಗಾಗಿ ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ಎಸಿ ರಾಜ್ಯ ಸಂಯೋಜಕ ಸುಬ್ಬಣ್ಣ ಎನ್ಎಸಿ ಎಂಬುದೇ ರಾಷ್ಟ್ರೀಯ ಸಂಘರ್ಷ ಸಮಿತಿ. ಇದರಲ್ಲಿ ಹೋರಾಟದ ಬಲವಿದೆ, ದೇಶಾದ್ಯಂತ ೭೮ ಲಕ್ಷ ಭವಿಷ್ಯ ನಿಧಿ ಪಿಂಚಣಿದಾರರ ಅತೀ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ಮಾದರಿ ಎನ್ಎಸಿ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದು, ಬುದ್ದಿವಂತರ, ವಿಚಾರವಂತರ ನಾಡು ಚಿಕ್ಕಮಗಳೂರಿನಲ್ಲಿ ಇಂದು ಎನ್ಎಸಿ ಘಟಕ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್ಎಸಿ ಸಂಘಟನೆ ಮುಖಂಡರಾದ ನಂಜುಂಡೇಗೌಡ, ಅನಿಲ್ ಇನಾಂದಾರ, ಎಸ್.ಎನ್. ಕುಲಕರ್ಣಿ, ಆರ್. ಸುಬ್ಬಣ್ಣ, ಹುಚ್ಚಪ್ಪ, ಜಿಲ್ಲಾಧ್ಯಕ್ಷ ಶಿವಕುಮಾರ್ ಯಗಟಿಪುರ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಕುಮಾರ್ ಉಪಸ್ಥಿತರಿದ್ದರು.
NAC district unit launched to fight for EPS workers’ demands