ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆಯಾಗಿ ಇಲ್ಲಿಗೆ ೧೦೦ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಜೂ.೧೮ ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಿಪಿಐ ಕಚೇರಿಯ ಬಿ.ಕೆ.ಸುಂದರೇಶ್ ಸಭಾಂಗಣದಲ್ಲಿ ಅಂದು ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪ್ರಸ್ತುತ ದೇಶ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ. ದಿನೇ ದಿನೆ ನಿರುದ್ಯೋಗ ಸಮಸ್ಯೆ, ಬಡತನ ವೃದ್ಧಿಯಾಗುತ್ತಿದೆ ಎಂದು ದೂರಿದರು.
ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಡವರು ಮತ್ತು ಶ್ರೀಮಂತರ ಮಧ್ಯೆ ಅಂತರ ತೀವ್ರಗೊಳ್ಳುತ್ತಿದೆ. ಕೂಲಿ ಕಾರ್ಮಿಕರು ಸಂಕಷ್ಟದ ಬದುಕನ್ನು ಕಳೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ, ಆರೋಗ್ಯ ಕೈಗೆಟುಕದಂತಾಗಿದೆ. ಬಡವರಿಗೆ ವಾಸಿಸಲು ಮನೆ, ನಿವೇಶನ ಇಲ್ಲ ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ ಎಂದರು.
ಸರಕಾರದ ಈ ಜನವಿರೋಧಿ ಧೋರಣೆಗಳ ವಿರುದ್ಧ ಹೋರಾಟ ರೂಪಿಸಲು ಸಿಪಿಐ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಸಹಕಾರ್ಯದರ್ಶಿ ಹೆಡದಾಳ್ಕುಮಾರ್, ನಗರ ಕಾರ್ಯದರ್ಶಿ ರಮೇಶ್, ಜಿಲ್ಲಾ ಮಂಡಳಿ ಸದಸ್ಯ ವಸಂತಕುಮಾರ್ ಉಪಸ್ಥಿತರಿದ್ದರು.
CPI Taluk Conference in the city on June 18