ಚಿಕ್ಕಮಗಳೂರು: ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಹೋಟೆಲ್, ಬೇಕರಿ, ಸಹಿ-ಖಾರ ತಿಂಡಿಗಳ ತಯಾರಕರು, ಕಲ್ಯಾಣ ಮಂಟಪ ಮತ್ತಿತರೆ ಉದ್ದಿಮೆದಾರರು ಸ್ವಚ್ಛತೆಗೆ ಆಧ್ಯತೆ ನೀಡಿ ಸಾಂಕ್ರಾಮಿಕ ರೋಗಗಳ ತಡೆಗೆ ನಗರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮನವಿ ಮಾಡಿದರು.
ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಬೇಕರಿ, ಸಿಹಿ-ಖಾರ ತಿನಿಸುಗಳ ತಯಾರಕರು, ಮಾರಾಟಗಾರರು, ಸ್ವೀಟ್ಸ್ ಸ್ಟಾಲ್, ಕಾಂಡಿಮೆಂಟ್ಸ್, ಕಲ್ಯಾಣ ಮಂಟಪಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಹಾರ ನಮ್ಮ ಆರೋಗ್ಯ ಒಂದು ಭಾಗ ಗುಣಮಟ್ಟದ ಆಹಾರ ಸೇವನೆ ಅಗತ್ಯವಿರುತ್ತದೆ. ಹೋಟೆಲ್ಗಳು, ಬೇಕರಿ ಇನ್ನಿತರೆ ತಿನಿಸು ಮಾರಾಟ ಮಾಡುವವರು ಉತ್ತಮವಾದ ಆಹಾರ ಪೂರೈಕೆ ಮಾಡಬೇಕು. ಅಗತ್ಯ ಇರುವಷ್ಟು ಮಾತ್ರ ತಯಾರು ಮಾಡಿಕೊಳ್ಳಬೇಕು. ಉಳಿಸಿ ಮತ್ತೆ ಮಾರಾಟ ಮಾಡಬಾರದು ಎಂದರು.
ಬಸ್ ನಿಲ್ದಾಣ, ಇತರೆ ಕೆಲವುಕಡೆ ತೆರೆದ ವಾತಾವರಣದಲ್ಲಿ ತಿಂಡಿ, ತಿನಿಸು ಮಾರಾಟ ಮಾಡುವುದನ್ನು ಗಮನಿಸಿದ್ದೇನೆ. ಜನ ಸಂದಣಿ ಪ್ರದೇಶಗಳಲ್ಲಿ ಧೂಳು, ಕ್ರಿಮಿ, ಕೀಟಗಳು ಇರುತ್ತವೆ. ಇವು ಆಹಾರ ಪದಾರ್ಥಗಳನ್ನು ಕೆಡಿಸಿ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಈ ಕಾರಣಕ್ಕೆ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಮುಚ್ಚಿದ ವಾತಾವರಣದಲ್ಲಿಟ್ಟು ಮಾರಾಟಮಾಡಬೇಕು ಎಂದರು.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟು ಮಾಡುತ್ತಿದೆ. ಈಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ವರ್ತಕರೇ ಕಡಿವಾಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಲವರು ಮದ್ಯ ಸೇವಿಸಿ ಸಾರ್ವಜನಿಕ ಪ್ರದೇಶದಲ್ಲೇ ಬಾಟಲಿಗಳನ್ನು ಬಿಸಾಡಿ ಬರುತ್ತಿದ್ದಾರೆ. ವಿದ್ಯಾವಂತರಾದರೂ ಅವಿವೇಕಿಗಳ ರೀತಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ ಅದಕ್ಕೆ ಅವರೇ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಎಂದರು.
ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧವಿದೆ. ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಅಲ್ಲದೆ ಶುಚಿತ್ವಕ್ಕೆ ಮಹತ್ವ ನೀಡಬೇಕು ಎಂದು ತಿಳಿಸಿದರು.
ನಗರಸಭೆ ಆಯಕ್ತ ಬಿ.ಸಿ.ಬಸವರಾಜು ಮಾತನಾಡಿ, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ಗಳು, ಬೇಕರಿಗಳು ಮತ್ತಿತರೆ ತಿಂಡಿ-ತಿನಿಸುಗಳನ್ನು ತಯಾರಿಸುವವರು ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಗ್ರಾಹಕರಿಗೆ ಕುಡಿಯಲು ಬಿಸಿಯಾದ ಅಥವಾ ಕಾಯಿಸಿ ಆರಿಸಿದ ನೀರು ನೀಡಬೇಕು ಎಂದು ಸೂಚಿಸಿದರು.
ಅಕ್ಟೋಬರ್ ವರೆಗೆ ಇದೇ ರೀತಿ ಮಳೆ ಮುಂದುವರಿಯಲಿದೆ. ಸೊಳ್ಳೆಗಳು ಉತ್ಪತ್ತಿಯಾಗುವ ಸಂದರ್ಭ ಇದಾಗಿರುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿಯ ಮಾಹಿತಿಗಳನ್ನು ನೀಡಿದೆ. ಇದಲ್ಲದೆ ಆಹಾರ ಪದಾರ್ಥಗಳನ್ನು ಪ್ರಿಡ್ಜ್ಗಳಲ್ಲಿಟ್ಟು ಮಾರಾಟ ಮಾಡವ ತಿನಿಸುಗಳಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತಾಗಬಾರದು. ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿಕೊಳ್ಳಬೇಕು ಎಂದರು.
ಪದೇ ಪದೇ ನಮ್ಮ ಸಿಬ್ಬಂದಿ ದಾಳಿ ಮಾಡಿ ದಂಡ ವಿಧಿಸಿದರೂ ಮತ್ತದೇ ಅಭ್ಯಾಸ ಪುನರಾವರ್ತನೆ ಆಗುತ್ತಲೇ ಇದೆ. ಆದರೆ ಅದಕ್ಕೆ ಶಾಶ್ವತ ಕಡಿವಾಣ ಹಾಕಬೇಕಿದೆ. ಜಿಲ್ಲೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಬೇಕೆಂದು ಆದೇಶವಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಇಲ್ಲವಾದಲ್ಲಿ ಅಂಗಡಿ, ಉದ್ದಿಮೆಗಳನ್ನು ಮುಚ್ಚಿ ದಂಡ ವಿಧಿಸುವುದು ಅನಿವಾರ್ಯವಾಗುತ್ತದೆ. ನಂತರ ಕೋರ್ಟ್ಗೆ ಹೋಗಿ ಆದೇಶ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪ ಮಾದರಿಯಾಗಿದೆ. ಅಲ್ಲಿ ಕುಡಿಯುವ ನೀರನ್ನೂ ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ಕೊಡುವುದಿಲ್ಲ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಿದ್ದಾರೆ. ಅದೇ ರೀತಿ ಉಳಿದವರು ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇನ್ನು ಏಳೆಂಟು ದಿನಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಕಲ್ಯಾಣ ಮಂಟಪಗಳಲ್ಲಿ ಸಮಾರಂಭ ನಡೆಯುವಾಗ ಪಾರ್ಕಿಂಗ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಸ್ವಲ್ಪ ಹೆಚ್ಚೇ ತೊಂದರೆ ಆಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಟ್ರಾಫಿಕ್ನಿಂದ್ ಕಿರಿಕಿರಿ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಶ್ರೀಧರ್ ಸ್ವಚ್ಛತೆ-ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
Ban on the use of plastic items in welfare centres