ಚಿಕ್ಕಮಗಳೂರು: ತಾಲ್ಲೂಕು ದಾಸರಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಬಿಜೆಪಿ ಬೆಂಬಲಿತ ಟಿ.ಎಸ್. ಶಿವೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ಬಿಜೆಪಿಯ ಕಟ್ಟಾಳುಗಳಾಗಿ ಇಲ್ಲಿರುವ ೮ ಗ್ರಾ.ಪಂ ಕ್ಷೇತ್ರಗಳಲ್ಲಿ ನಾಯಕತ್ವ ಬೆಳೆಸಿಕೊಂಡು ಚುನಾವಣೆ ಸಂದರ್ಭದಲ್ಲಿ ೭ ಸದಸ್ಯರನ್ನು ಗೆಲ್ಲಿಸುವ ಮೂಲಕ ಸಾಧನೆ ಮಾಡಿರುವ ನೂತನ ಅಧ್ಯಕ್ಷ ಶಿವೇಗೌಡರಿಗೆ ಎಲ್ಲಾ ಸದಸ್ಯರು ಒಮ್ಮತದ ಸಹಕಾರ ನೀಡಿದ್ದಾರೆಂದು ಶ್ಲಾಘಿಸಿದರು.
ಶಿವೇಗೌಡರ ಅಧಿಕಾರವಧಿಯಲ್ಲಿ ಈ ಪಂಚಾಯಿತಿಯಲ್ಲಿ ಹಲವಾರು ವಿವಿಧ ಅಭಿವೃದ್ಧಿ ಕೆಲಸಗಳಾಗಿದ್ದು, ಈ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೊಡುಗೆ ಜೊತೆಗೆ ಇವರ ಪ್ರಯತ್ನ ಬಹಳ ಮುಖ್ಯ ಎಂದು ಹೇಳಿದರು.
ಬಡವರು, ಕೂಲಿಕಾರ್ಮಿಕರ ಕೆಲಸಗಳಿಗೆ ಹೆಚ್ಚು ಒತ್ತುನೀಡುವ ಮೂಲಕ ಶ್ರದ್ಧೆ, ನಿಷ್ಠೆಯಿಂದ ಅವರ ಪರವಾಗಿ ಕೆಲಸ ಮಾಡುತ್ತಿರುವ ಶಿವೇಗೌಡರು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ವಿಶ್ವಾಸದೊಂದಿಗೆ ಅಧಿಕಾರದಲ್ಲಿ ಮುಂದುವರೆಯಲಿ, ಬಿಜೆಪಿ ಪಕ್ಷಕ್ಕೆ ಒಳ್ಳೆಯ ಹೆಸರು ತರಲಿ ಎಂದು ಶುಭ ಹಾರೈಸಿದರು.
ಮಾಜಿ ಅಧ್ಯಕ್ಷ ದೀಪಕ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಶಿವೇಗೌಡರಿಗೆ ಸಿ.ಟಿ. ರವಿಯವರ ಮಾರ್ಗದರ್ಶನ ಭದ್ರ ಬುನಾದಿಯಾಗಿದ್ದು, ದಾಸರಹಳ್ಳಿ ಗ್ರಾಮ ಪಂಚಾಯಿತಿ ಇದೂವರೆಗೆ ಬಿಜೆಪಿಯ ಭದ್ರ ಕೋಟೆಯಾಗಿದೆ ಎಂದು ಹೇಳಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪರ ಆಡಳಿತ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದು ಯೋಜನೆಗಳು ಕಾರಣ ಎಂದ ಅವರು, ಕೇಂದ್ರಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕಳೆದ ೧೧ ವರ್ಷಗಳ ನರೇಂದ್ರ ಮೋದಿಯವರ ಕನಸು ನನಸು ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚು ಅಭಿವೃದ್ಧಿ ಆದಾಗ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದರು.
ಮುಂಬರುವ ಗ್ರಾ.ಪಂ, ಜಿ.ಪಂ, ತಾ.ಪಂ, ಎಂಎಲ್ಎ, ಎಂಎಲ್ಸಿ ಚುನಾವಣೆಗಳಲ್ಲಿ ಇದೇ ರೀತಿ ದಾಸರಹಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿಯ ಭದ್ರ ಕೋಟೆಯಾಗಿ ಉಳಿಯಲಿ ಎಂದು ಇಂಗಿತ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಟಿ.ಎಸ್. ಶಿವೇಗೌಡ ಅಧಿಕಾರ ಸ್ವೀಕರಿಸಿ ಮಾತನಾಡಿ, ಮುಂದೆಯೂ ಬಿಜೆಪಿ ಅಭ್ಯರ್ಥಿಗಳು ಈ ಪಂಚಾಯಿತಿಯ ಅಧಿಕಾರ ಹಿಡಿಯಬೇಕು ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಆಶೀರ್ವಾದ ನೀಡಿ ನನ್ನನ್ನು ಆಯ್ಕೆಮಾಡಿದ್ದು, ಎಲ್ಲರಿಗೂ ತುಂಬ ಹೃದಯದ ಧನ್ಯವಾದ ಸಲ್ಲಿಸಿದರು.
ಶಾಸಕ ಸಿ.ಟಿ. ರವಿಯವರ ಅಧಿಕಾರವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆದ ಜನಪರ ಅಭಿವೃದ್ಧಿ ಕಾರ್ಯಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿ ೭ ಗ್ರಾ.ಪಂ ಸದಸ್ಯರು ಆಯ್ಕೆಯಾಗಲು ಕಾರಣ ಎಂದು ಹೇಳಿದರು.
ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ, ಮನೆ ಹಂಚಿಕೆ ಬಗ್ಗೆ ಜಾಗ ಗುರ್ತಿಸಿಲ್ಲ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಬಂದು ಎರಡು ವರ್ಷವಾದರೂ ನಿವೇಶನ ಹಂಚಿಕೆ ಮಾಡಲಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಲಲಿತ, ಸದಸ್ಯರುಗಳಾದ ಅವಿಲಾ ಹೆಚ್.ಸಿ, ಚಂದ್ರಶೇಖರ್ ಹೆಚ್.ಎನ್, ಮಂಜುನಾಥ್. ಎಸ್, ಮಾಲಾಶ್ರೀ, ವಿನೋದ ನಾಗೇಶ್, ಗ್ರಾಮಸ್ಥರಾದ ಸತೀಶ್, ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು
T.S. Sivegowda elected unopposed as Dasarahalli Gram Panchayat President