ಚಿಕ್ಕಮಗಳೂರು: ಉತ್ತಮ ಆರೋಗ್ಯ, ಉತ್ತಮ ಆಹಾರ, ಉತ್ತಮ ಯೋಗಾಭ್ಯಾಸ ಇವು ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಿಸಿದರು.
ಅವರು ಇಂದು ೧೧ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಯೋಗ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಯೋಗನಡಿಗೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಯೋಗಾಭ್ಯಾಸವನ್ನು ಪ್ರತಿನಿತ್ಯ ಪಾಲಿಸಿಕೊಂಡು ಬಂದಲ್ಲಿ ರೋಗಮುಕ್ತ ದೇಶವಾಗಿಸಲು ಪರಿಣಾಮಕಾರಿಯಾಗಲಿದ್ದು, ಜೂ.೨೧ ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಬಗ್ಗೆ ವಿಶ್ವದೆಲ್ಲೆಡೆ ಜಾಗೃತಿ ಮೂಡಿಸಿದ್ದಾರೆಂದು ಹೇಳಿದರು.
ಇಂದು ಕಲುಷಿತ ಆಹಾರ ಸೇವನೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಆರೋಗ್ಯಕ್ಕೆ ಆದ್ಯ ಗಮನ ನೀಡಿಬೇಕಾದರೆ ಯೋಗಾಭ್ಯಾಸ ಅತೀ ಮುಖ್ಯ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಗೀತಾ.ಎಸ್ ಮಾತನಾಡಿ, ಭಾರತ ದೇಶ ನೀಡಿದ ವಿಶ್ವಕ್ಕೆ ಅತೀ ದೊಡ್ಡ ಅಮೂಲ್ಯ ಕೊಡುಗೆಯಲ್ಲಿ ಯೋಗವೂ ಒಂದಾಗಿದೆ. ಈ ವರ್ಷ ೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ಆಯುಷ್ಮಾನ್ ಆರೋಗ್ಯ ಸಂಗಮ ಮಂದಿರ, ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೂ.೨೧ ರಂದು ಆಯೋಜಿಸಲಾಗಿದೆ ಎಂದರು.
ಯೋಗದ ಬಗ್ಗೆ ಜಾಗೃತಿ ಮೂಡಿಸಲು ಇಂದು ಯೋಗ ನಡಿಗೆ ಏರ್ಪಡಿಸಲಾಗಿದೆ, ತಾಲ್ಲೂಕು ಕಚೇರಿಯಿಂದ ಎಂ.ಜಿ ರಸ್ತೆ ಮಾರ್ಗವಾಗಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.
ಯೋಗ ಧನುಷ್ ಕೆಎಸ್ಆರ್ಟಿಸಿ ನೌಕರರು ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಜಿಲ್ಲಾ ಕಾರಾಗೃಹ ಕೈದಿಗಳಿಗೆ, ದಿವ್ಯಾಂಗರಿಗೆ ಈ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹಸಿರು ಯೋಗವನ್ನು ವಿಶ್ವ ಪರಿಸರ ದಿನದಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ೧೦೦ ಗಿಡಗಳನ್ನು ನೆಡುವ ಮೂಲಕ ಹಮ್ಮಿಕೊಳ್ಳಲಾಗಿತ್ತು ಎಂದು ವಿವರಿಸಿದರು.
ಈ ಮೆರವಣಿಗೆಯಲ್ಲಿ ಎಸ್ಎಸ್ವೈ, ಪ್ರಭೋದಿನಿ, ಎಸ್ಪಿವೈಎಸ್, ಭಾರತ್ ಸ್ವಾಭಿಮಾನ್, ಅನುರತ್ ಸಮಿತಿ, ಜ್ಞಾನರಶ್ಮಿ ಶಾಲೆ, ಎಂಇಎಸ್ ಶಾಲೆ, ಸ್ಕೌಟ್ ಮತ್ತು ಗೈಡ್ಸ್, ಮೇರಾ ಯುವ ಭಾರತ್, ಎನ್ಎಸ್ಎಸ್ ಘಟಕ ಪಾಲ್ಗೊಂಡಿದ್ದವು.
Yoga is helpful for good health.