ಚಿಕ್ಕಮಗಳೂರು: – ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಂಚಿಣಿದಾರರನ್ನು ಅನರ್ಹಗೊಳಿಸುವ ಮೂಲಕ ಸಾಮಾನ್ಯ ಜನರು, ಬಡವರು, ದುರ್ಬಲರ ಮೇಲೆ ಗಧಾಪ್ರಹಾರ, ದೌರ್ಜನ್ಯ ಮಾಡಲು ಹೊರಟಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂರ್ನಾಲ್ಕು ದಿನಗಳ ಹಿಂದೆ ಹೊಡಿಸಿರುವ ಸುತ್ತೋಲೆಯಲ್ಲಿ ೬೦-೬೫ ವರ್ಷ ಮೇಲ್ಪಟ್ಟ ೧೪ ಲಕ್ಷ ಮಂದಿ ಹಿರಿಯ ಸಂದ್ಯಾ ಸುರಕ್ಷಾ ಫಲಾನುಭವಿಗಳು ಮತ್ತು ೬೫ ವರ್ಷ ಮೇಲ್ಪಟ್ಟ ೯ ಲಕ್ಷ ಮಂದಿ ವೃದ್ಧಾಪ್ಯ ವೇತನ ಪಡೆಯುವ ಬಡ ಪಿಂಚಿಣಿದಾರರನ್ನು ಅನರ್ಹಗೊಳಿಸುವ ಹುನ್ನಾರ ನಡೆಸಿದೆ. ಇದಕ್ಕಾಗಿ ಪರಿಶೀಲನೆ ನಡೆಸಲು ಸೂಚನೆ ನೀಡಿದೆ ಎಂದು ದೂರಿದರು.
ವೃದ್ಧರ ಜೀವಿತದ ಕೊನೆಯ ದಿನಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ವ್ಯತ್ಯಾಸಗಳಾದಲ್ಲಿ, ಔಷಧಿ-ಮಾತ್ರೆ ಇನ್ನಿತರೆ ಖರ್ಚಿಗೆ ನೆರವಾಗಲು ಮತ್ತು ಜೀವಕ್ಕೊಂದು ಭದ್ರತೆಕೊಡುವ ದೃಷ್ಠಿಯಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಇದೀಗ ಪ್ರತಿ ಗ್ರಾ.ಪಂ.ಗಳಲ್ಲಿ ೧೫೦ ರಿಂದ ೨೫೦ ಮಂದಿ ಹಿರಿಯರ ಹೆಸರುಗಳನ್ನು ಗುರುತಿಸಿ ಪರಿಶೀಲನೆ ನಡೆಸಲು ಗ್ರಾಮ ಕಾರಣಿಕರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದೆ ಎಂದರು.
ಅವರ ಆದಾಯದ ಮೊತ್ತ ೩೨ ಸಾವಿರಕ್ಕಿಂತ ಹೆಚ್ಚಾಗಿದೆ. ಅನ್ನುವ ಕಾರಣಕೊಟ್ಟು ಪಿಂಚಣಿ ರದ್ದು ಪಡಿಸಲು ಸರ್ಕಾರ ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ಕೋಟಿ ರೂ. ಬೊಕ್ಕಸಕ್ಕೆ ಉಳಿಯುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಒಟ್ಟು ರಾಜ್ಯದಲ್ಲಿ ೫೫ ಲಕ್ಷ ಜನ ಪಿಂಚಣಿ ಪಡೆಯುತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವ ಮಾಹಿತಿ ಪ್ರಕಾರ ಸುಮಾರು ೨೪ ಲಕ್ಷ ಜನರು ಅನರ್ಹರಾಗುವ ಅಪಾಯ ಕಂಡು ಬರುತ್ತಿದೆ. ಪ್ರತಿ ಗ್ರಾಮ ಲೆಕ್ಕಿಗರು ೨೫೦ ರಿಂದ ೩೦೦ ಜನರ ಪಟ್ಟಿಯನ್ನು ಹಿಡಿದು ಓಡಾಡುತ್ತಿದ್ದಾರೆ ಎಂದರು.
ಬಡವರಿಗೆ ೨೦೦೦ ರೂ.ಕೊಡುತ್ತೇವೆ ಎನ್ನುವುದು ಒಂದೆಡೆಯಾದರೆ, ಅದೇ ಮನೆಯಲ್ಲಿ ಹಿರಿಯರ ಜೀವನ ಭದ್ರತೆಗೆ ಕೊಡುತ್ತಿರುವ ಹಣವನ್ನು ಕಿತ್ತುಕೊಳ್ಳಲಾಗುತ್ತಿದೆ. ಇದೊಂದು ಬಡವರ ಪಿಂಚಣಿ ಮೇಲೆ ಮಾಡಿರುವ ದುರಾಕ್ರಮಣ, ಬೇಜಾಬ್ದಾರಿ ಮತ್ತು ಬಡವರ ವಿರೋಧಿ ನೀತಿ ಎಂದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ೩೩೦ ಗ್ರಾ.ಪಂ.ಗಳಲ್ಲಿ ಜೂನ್ ೨೩ ರಂದು ಏಕ ಕಾಲದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ಈ ಹೋರಾಟ ರಾಜ್ಯಾದ್ಯಂತ ವ್ಯಾಪಿಸಬೇಕಿದೆ ಎಂದರು.
ನಾವು ಸಂವಿಧಾನದ ಆಶಯದಂತೆ ನಡೆದುಕೊಳ್ಳುವವರು ಎಂದು ರಾಜ್ಯ ಸರ್ಕಾರ ತನ್ನನ್ನು ಪ್ರಸಂಶಿಸಿಕೊಳ್ಳುತ್ತದೆ ಆದರೆ ಇಂದು ೯ ಮತ್ತು ೧೧ ಏಕ ವಿನ್ಯಾಸ ನಕ್ಷೆಗಳನ್ನು ನೀಡಲು ಗ್ರಾ.ಪಂ.ಗಿದ್ದ ಅಧಿಕಾರವನ್ನು ರಾಜ್ಯ ಸರ್ಕಾರ ಕಿತ್ತುಕೊಂಡು ಸ್ಥಳೀಯ ತಾಲ್ಲೂಕು ಮಟ್ಟ ಅಥವಾ ಜಿಲ್ಲಾ ಮಟ್ಟದ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಿದೆ. ಒಂದೊಂದು ಗ್ರಾ.ಪಂ.ಗಳಲ್ಲಿ ೯ ಮತ್ತು ೧೧ ನಮೂನೆ ಪಡೆಯುತ್ತಿದ್ದವನು ಇಂದು ಪ್ರಾಧಿಕಾರಗಳನ್ನು ಸುತ್ತಬೇಕಿದೆ. ಅಲ್ಲಿ ಓರ್ವ ಸಿಬ್ಬಂದಿಯೂ ಇರುವುದಿಲ್ಲ. ಮತ್ತು ಹಣಕೊಟ್ಟವರಿಗೆ ಮಾತ್ರ ನಮೂನೆ ಎನ್ನುವ ಬ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಅಧಿಕಾರ ವಿಕೇಂದ್ರೀಕರಣದ ಮೂಲ ವ್ಯವಸ್ಥೆ ಇರುವ ಗ್ರಾ.ಪಂ. ಹಕ್ಕನ್ನು ಪ್ರಾಧಿಕಾರಕ್ಕೆ ಕೊಡುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಿದ್ದರಾಮಯ್ಯ ಸರ್ಕಾರ ದೊಡ್ಡ ಪೆಟ್ಟು ನೀಡುತ್ತಿದೆ. ನಾಡಿದ್ದು ಅವಳಿ ಜಿಲ್ಲೆಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಇದೂ ಸಹ ಪ್ರಮುಖ ವಿಷಯವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತಿರುವುದು ಸರ್ಕಾರದ ಮತ್ತೊಂದು ಬಡವರ ವಿರೋಧಿ ಕಾರ್ಯವಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಅಲ್ಲಿ ಔಷಧಿ, ಮಾತ್ರೆಗಳು ಸಿಗುತ್ತವೆ ಆದರೂ ಅವುಗಳನ್ನು ಮುಚ್ಚಿ ನಾವೇ ಎಲ್ಲದನ್ನೂ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅವರೇ ಎಲ್ಲಾ ಚಿಕಿತ್ಸೆ ಕೊಡುವುದಾದರೂ ಜನೌಷಧ ಕೇಂದ್ರಗಳು ಅಲ್ಲಿದ್ದರೆ ಅವರಿಗೇನು ತೊಂದರೆ ಎಂದು ಪ್ರಶ್ನಿಸಿದ ಅವರು, ಒಟ್ಟಾರೆ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಜನೌಷಧಿ ಕೇಂದ್ರಗಳು ಜನರ ಕಣ್ಣಿಗೆ ಬೀಳಬಾರದು ಎನ್ನುವುದು ಸರ್ಕಾರದ ಮೂಲ ದುರುದ್ದೇಶ ಎಂದು ದೂರಿದರು.
ಕೇಂದ್ರದ ಯೋಜನೆಗಳು ಅನುಷ್ಠಾನಗೊಳ್ಳದಿರಲು ಏನೆಲ್ಲಾ ಬೇಕು ಅದೆಲ್ಲವನ್ನೂ ರಾಜ್ಯ ಸರ್ಕಾರ ಮಾಡುತ್ತದೆ ನಂತರ ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟಿಲ್ಲ ಎನ್ನುವ ತಗಾದೆ ಮಾಡುವ ಕೆಲಸವನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.
Bullying the weak by disqualifying pensioners