ಚಿಕ್ಕಮಗಳೂರು: – ವಿಡಂಬನೆ, ಲೋಕ ಶಿಕ್ಷಣ, ನೈತಿಕ ಮೌಲ್ಯಗಳನ್ನು ನವಿರಾಗಿ ಕಟ್ಟಿಕೊಟ್ಟ ಸಿದ್ಧಯ್ಯಪುರಾಣಿಕ ಆಧುನಿಕ ವಚನಕಾರರ ಧ್ರುವತಾರೆ ಎಂದು ಸಾಹಿತಿ, ವಾಗ್ಮಿ ಚಟ್ನಳ್ಳಿಮಹೇಶ್ ನುಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಅಖಿಲ ಭಾರತೀಯ ಸಾಹಿತ್ಯಪರಿಷದ್ ಸಂಯುಕ್ತವಾಗಿ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್ನಲ್ಲಿ ‘ಡಾ.ಸಿದ್ಧಯ್ಯಪುರಾಣಿಕ’ ಜನ್ಮದಿನಾಚರಣೆ ಅಂಗವಾಗಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪುರಾಣಿಕರ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯ’ ಕುರಿತಂತೆ ಅವರು ಉಪನ್ಯಾಸ ನೀಡಿ ಸಂವಾದಿಸಿದರು.
ನಾಡುಕಂಡ ದಕ್ಷ ಅಧಿಕಾರಿಗಳಲ್ಲಿ ಒಬ್ಬರಾದ ಡಾ.ಸಿದ್ಧಯ್ಯಪುರಾಣಿಕರು ‘ಸ್ವತಂತ್ರಧೀರ ಸಿದ್ಧೇಶ್ವರ’ ಅಂಕಿತದೊಂದಿಗೆ ಸುಮಾರು ೨೦೦೦ಕ್ಕೂ ಹೆಚ್ಚು ಆಧುನಿಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ನವೀರಾದ ಹಾಸ್ಯ, ಮೊನಚಾದ ಟೀಕೆ, ಬದುಕಿನ ಮೌಲ್ಯಗಳು, ವಿಡಂಬನೆಗಳ ಮೂಲಕ ಗಮನ ಸೆಳೆದವರು.
ಐಎಎಸ್ ಅಧಿಕಾರಿಗಳಾಗಿ ಕನ್ನಡದ ಸೇವೆ ಮಾಡಿದ ಡಾ.ಮಾಸ್ತಿವೆಂಕಟೇಶ ಅಯ್ಯಂಗಾರ, ಕೆ.ಎನ್.ನಾಗೇಗೌಡ ಮತ್ತಿತರರ ಸಾಲಿನಲ್ಲಿ ನಿಲ್ಲಬಹುದಾದ ಸಿದ್ಧಯ್ಯಪುರಾಣಿಕರು ಲೋಕ ನೆಮ್ಮದಿಗೆ ಪುಷ್ಠಿ ನೀಡುವ ಅಮೃತ ಘಳಿಗೆ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ರಚಿಸಿದವರು. ಜೀವ ಸಂಕುಲದ ಹೊಂದಾಣಿಕೆಯ ಬಗ್ಗೆ ನಿಸರ್ಗಜ್ಞಾನ ಪೂರಕವಾದ ಅವರ ಅಭಿವ್ಯಕ್ತಿ ವಚನಗಳಾಗಿ ಗಮನಸೆಳೆದಿವೆ ಎಂದರು.
ವಚನಗಳು ಸಾಹಿತ್ಯಕ್ಷೇತ್ರದ ವಿಶಿಷ್ಟ ಪ್ರಕಾರ. ಪದ್ಯವೂ ಹೌದು ಗದ್ಯವೂ ಹೌದು. ವಚನಗಳನ್ನು ಗಪದ್ಯವೆಂದೂ ಕರೆಯಲಾಗಿದೆ. ವಚನಗಳಿಗೆ ಅಂಕಿತವಿರುತ್ತದೆ. ಆಲೋಚನೆಗಳು ಶಬ್ದ-ಸಾಲುಗಳಾಗಿ ವಚನಗಳೆನಿಸಿಕೊಂಡಿವೆ. ಅಂಕಿತಕ್ಕೊಳಪಟ್ಟು ಸಾಹಿತ್ಯದ ಸಾಲು ನಿರ್ಮಾಣವಾದರೆ ಅದನ್ನು ವಚನವೆಂದು ಗುರುತಿಸಬಹುದು. ಮೊನಚು, ಸತ್ವ, ಬಂಧ, ಆತ್ಮಾವಲೋಕನಪ್ರಜ್ಞೆ ವಚನಗಳ ವಿಶೇಷ. ೧೨ನೆಯ ಶತಮಾನದ ವಚನಕಾರರು ಅನುಭಾವದ ನೆಲೆಯಲ್ಲಿ ವಚನಸಾಹಿತ್ಯ ಪ್ರಾರಂಭಿಸಿದರೆ ಕಳೆದ ಶತಮಾನದಿಂದೀಚೆಗೆ ಜಚನಿ, ಡಾ.ಸಿದ್ಧಯ್ಯಪುರಾಣಿಕ, ದೇಜಗೌ, ಮಹಾದೇವಬಣಕಾರ್, ಸಿಪಿಕೆ ಮತ್ತಿತರರು ಆಧುನಿಕ ವಚನಕಾರರೆಂದು ಗುರುತಿಸಲ್ಪಟ್ಟರು ಎಂದು ಚಟ್ನಳ್ಳಿಮಹೇಶ ವಿವರಿಸಿದರು.
ಶರಣ ಸಂಕುಲ, ವಚನನಂದನ, ವಚನೋಧ್ಯಾನ ಮತ್ತಿತರ ವಚನ ಸಂಕಲನಗಳನ್ನು ರಚಿಸಿರುವ ಡಾ.ಸಿದ್ಧಯ್ಯಪುರಾಣಿಕ್, ವಚನ ಎಂದರೆ ಸತ್ವ ಎಂಬುದನ್ನು ಸಾಬೀತುಪಡಿಸಿದವರು. ಶೋಷಿತರ ಧ್ವನಿಯಾದವರು. ಅರಿವಿನ ಹರವನ್ನು ವಿಸ್ತರಿಸಿದವರು. ಚಿಂತನಾಭರಿತ ಹೂರಣ ನೀಡಿದವರೆಂದು ಬಣ್ಣಿಸಿದರು.
ವಿದ್ಯೆ ಬಂದು ವಿನಯ ಹೋಯ್ತು, ಬುದ್ಧಿಬಂದು ವಿವೇಕ ಹೋಯ್ತು, ವಿಜ್ಞಾನ ಬಂದು ನೆಮ್ಮದಿ ಹೋಯ್ತು. ಸಂಪತ್ತು ಬಂದು ಸಂಸ್ಕೃತಿ ಹೋಯ್ತು, ಸ್ವತಂತ್ರ ಬಂದು ಸಂಮೃದ್ಧಿ ಹೋಯಿತು’, ಎಂಬ ವ್ಯತಿರಿಕ್ತ ಪರಿಣಾಮ ತೆರೆದಿಟ್ಟವರು ಡಾ.ಪುರಾಣಿಕ್. ‘ಏನಾದರೂ ಆಗು ಮೊದಲು ಮಾನವನಾಗು…’ ಎಂಬುದು ಅವರ ಮಹತ್ವದ ಸಂದೇಶ ಎಂದ ಚಟ್ನಳ್ಳಿಮಹೇಶ್, ‘ಅಯ್ಯೋ ಪಾಪ ಎಂಬುದೇ ಪುಣ್ಯ. ಅಯ್ಯೋ ಪಾಪಿ ಎಂಬುದೇ ಪಾಪ’ ಎಂದ ತೆರೆದ ಹೃದಯಿ.
‘ಸಿಪ್ಪೆ ತೆಗೆದು ಬಿತ್ತಿದ ಶೇಂಗಾ ಸಿಪ್ಪೆ ಧರಿಸಿಯೆ ಹುಟ್ಟುತ್ತದೆ. ನರ ಅರಿವಿನ ಜನ್ಮ ತಳಿದಿದ್ದು ಕೂಡಿ ಬಾಳಲೆಂದೋ ಕಚ್ಚಾಡಿ ಸಾಯಲೆಂದೋ…’ ಎಂಬ ವಚನದ ಮೂಲಕ ಸಾಮರಸ್ಯಕ್ಕೆ ಡಾ.ಪುರಾಣಿಕ ಅತ್ಯುತ್ತಮ ಮಾದರಿಯ ಸೂತ್ರ ನೀಡಿದ್ದಾರೆಂದ ಚಟ್ನಳ್ಳಿಮಹೇಶ್, ಕಲಹವಿಲ್ಲದೆ ಕೂಡಿ ಕದನವಿಲ್ಲದೆ ಬಾಳಿ ಹಂಚಿ ಉಣ್ಣುವ ಸಂಸ್ಕೃತಿ ಮಾನವನದಾಗಬೇಕೆಂಬ ಆಶಯದಂತೆ ಬಾಳಿದವರೆಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ವಿಶ್ರಾಂತ ಜಂಟಿ ನಿರ್ದೇಶಕ ಬಿ.ಪಿ.ಶಿವಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಕಲೆ ಮತ್ತು ಸಾಹಿತ್ಯ ಅರಿವಿನ ಹರವನ್ನು ವಿಸ್ತರಿಸುತ್ತದೆ. ಜಿಲ್ಲೆಯ ಇತಿಹಾಸವನ್ನು ಅರಿವುದು ಎಲ್ಲರ ಕರ್ತವ್ಯ. ವಿದ್ಯಾರ್ಥಿ ಯುವಜನರು ನಮ್ಮ ನಡುವಿನ ಸಾಹಿತಿ ಕಲಾವಿದರನ್ನು ಪರಿಚಯಿಸಿಕೊಳ್ಳಬೇಕು. ಜ್ಞಾನ ಪಿಪಾಸುಗಳಾಗಿ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜದ ಆಗು-ಹೋಗುಗಳನ್ನು ಗಮನಿಸುವ ಮನಸ್ಥಿತಿ ಹೊಂದಬೇಕು. ಪುಸ್ತಕದಿಂದ ವಿಚಾರಗಳನ್ನು ಮಸ್ತಕಕ್ಕೆ ಇಳಿಸಲು ಇಂತಹ ಸಾಹಿತ್ಯ ಅವಲೋಕನ ಸಹಕಾರಿ ಎಂದ ಶಿವಮೂರ್ತಿ, ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ ಮತ್ತು ಸಾಹಿತ್ಯದ ಆಶಯ ಮನರಂಜನೆಯಷ್ಟೇ ಅಲ್ಲ, ಮನೋವಿಕಾಸವೂ ಹೌದು. ವ್ಯಕ್ತಿನಿರ್ಮಾಣದ ಮೂಲಕ ಆರೋಗ್ಯಪೂರ್ಣ ಸಮಾಜನಿರ್ಮಾಣಕ್ಕೆ ಪೂರಕವಾದ ಸಾಹಿತಿಗಳು ಹಾಗೂ ಸಾಹಿತ್ಯವನ್ನು ಮೆಲುಕು ಹಾಕುವ ಪ್ರಯತ್ನ ಇದೆಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಸೋಮಶೇಖರಪ್ಪ ಶುಭಹಾರೈಸಿ ಮುಖ್ಯಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲೆ ಕವಿತಾ ಸಮಾರಂಭವನ್ನು ಉದ್ಘಾಟಿಸಿದರು. ಪ್ರತಿಷ್ಠಾನದ ಸದಸ್ಯ ವಿಜಯಕುಮಾರ್, ಕಾರ್ಯದರ್ಶಿ ಶಶಿಕಲಾನಾಯಕ್, ವ್ಯವಸ್ಥಾಪಕಿ ಶೋಭಿತಾ, ಉಪನ್ಯಾಸಕರಾದ ವರ್ಷಿತಾ ಮತ್ತು ಮಹಾಲಕ್ಷ್ಮಿ ವೇದಿಕೆಯಲ್ಲಿದ್ದರು. ಅಭಾಸಾಪ ಜಿಲ್ಲಾಸಮಿತಿ ಸದಸ್ಯ ಎಸ್.ಎಸ್.ಸಾಗರ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮೀನಾ ಪ್ರಾರ್ಥಿಸಿ, ತನುಜಾ ನಿರೂಪಿಸಿ ವಂದಿಸಿದರು.
Siddaiah Puranik the pole star of modern orators