ಚಿಕ್ಕಮಗಳೂರು: ಮಳೆಯಿಂದ ಮರ ಬಿದ್ದು ಸಾವಿಗೀಡಾದ ಎನ್.ಆರ್.ಪುರ ತಾಲ್ಲೂಕಿನ ಇಬ್ಬರ ಮನೆಗಳಿಗೆ ಇಂದು ತೆರಳಿದ ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಾಂತ್ವನ ಹೇಳಿದರಲ್ಲದೆ, ತಲಾ ೫ ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ವಿತರಿಸಿದರು.
ಖಾಂಡ್ಯ ಹೋಬಳಿ ಬಿಳುಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಮರ ಬಿದ್ದು ಮೃತಪಟ್ಟ ಅನಿಲ್ ಪಾಯಸ್ ಅವರ ಮನೆಗೆ ತೆರಳಿ ಪರಿಹಾರದ ಚೆಕ್ ವಿತರಿಸಿದರು. ಅನಂತರ ಅದೇ ತಾಲ್ಲೂಕಿನ ಕೊಗ್ರೆ ಬಳಿ ಆಟೋ ರಿಕ್ಷಾದ ಮೇಲೆ ಮರ ಬಿದ್ದು ಮೃತಪಟ್ಟ ಚಾಲಕ ರತ್ನಾಕರ ಅವರ ಮನೆಗೂ ತೆರಳಿ ಮೃತನ ಸಹೋದರನಿಗೆ ಪರಿಹಾರದ ಚೆಕ್ ವಿತರಿಸಿದರು.
ಅನಂತರ ಮಾತನಾಡಿದ ಅವರು, ಪರಿಹಾರ ನೀಡುವುದರಿಂದ ಹೋದ ಜೀವ ಮರಳಿ ಬರುವುದಿಲ್ಲ. ಆದರೂ ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲಿ ಎನ್ನುವ ಕಾರಣಕ್ಕಾಗಿ ಪರಿಹಾರ ನೀಡಲಾಗುತ್ತಿದೆ. ಸಂತ್ರಸ್ತರ ಮನೆ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿಲ್ಲ. ಅದನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ಪೂರ್ಣಗೊಳಿಸಿಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮೃತನ ಪುತ್ರಿಯ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ತಿಳಿಸಿದರು.
ಎಲ್ಲೆಲ್ಲಿ ಅಪಾಯಕಾರಿ ಮರಗಳಿವೆ ಅವುಗಳನ್ನು ಹಾಗೂ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದ ಸಚಿವರು, ಜೊತೆಗೆ ಒಣಗಿದ ಮರಗಳಿವೆ ಅವುಗಳನ್ನು ಕೂಡ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಹ ಅರಣ್ಯ ಇಲಾಖೆಗೆ ನಿರ್ದೇಶನ ನೀಡುವುದಾಗಿ ತಿಳಿಸಿದ ಸಚಿವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವುದಾಗಿ ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
District in-charge minister distributes compensation cheque of Rs. 5 lakh