ಚಿಕ್ಕಮಗಳೂರು: ಸಾವಿರಾರು ವರ್ಷಗಳ ಪರಂಪರೆ ಇರುವ ನಮ್ಮ ಯೋಗ ಶಿಕ್ಷಣದ ಕಡೆಗೆ ವಿದೇಶದ ಅನ್ಯ ಧರ್ಮೀಯರೂ ಸಹ ಒಲವು ಹೊಂದಿರುವುದು ನಮ್ಮ ದೇಶದ ಸಂಸ್ಕೃತಿಗೆ ಹೆಮ್ಮೆಯ ಸಂಗತಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸೇವಾದಳ, ಎನ್.ಎಸ್.ಎಸ್. ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಮೇರಾ ಯುವ ಭಾರತ್ ಮತ್ತಿತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಇಂದು ಬೆಳಿಗ್ಗೆ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗದ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಅಂಶವನ್ನು ನಮ್ಮ ದೇಶದ ಸೈನಿಕರಿಗೂ ಈಗ ಹೇಳಿಕೊಡಲಾಗುತ್ತಿದೆ ಎಂದರು.
ಶಿಕ್ಷಣ ಕಲಿಯದಿದ್ದರೆ, ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ, ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳದಿದ್ದರೆ ನಾವು ಹುಟ್ಟಿದ್ದಕ್ಕೂ ಸಾರ್ಥಕವೆನಿಸುವುದಿಲ್ಲ. ಶಿಕ್ಷಣ ಮತ್ತು ಆರೋಗ್ಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ಬೇರೆ ಬೇರೆ ದೇಶಗಳಿಗೆ ಹೋಗಿ ಬರಬಹುದು. ಆದರೆ ಅದು ಪ್ರವಾಸ ಮಾತ್ರ. ಆದರೆ ವಾಸಕ್ಕೆ ಯೋಗ್ಯವಾಗಿರುವುದು ನಮ್ಮ ಸಂಸ್ಕಾರವಂತ ದೇಶ ಭಾರತ ಮಾತ್ರ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಯೋಗ ಬದುಕಿನ ಭಾಗವಾದಾಗ ನಾವು ನಿರೋಗಿಗಳಾಗಿ ನಮ್ಮ ಆಯುಷ್ಯವನ್ನು ಪೂರ್ಣಗೊಳಿಸಬಹುದು. ಆದರೆ ನಮ್ಮ ಪರಿಸ್ಥಿತಿ ತನ್ನೊಳಗೇ ಹುದುಗಿರುವ ಸುಗಂಧವನ್ನು ಅರಸುವ ಕಸ್ತೂರಿ ಮೃಗದಂತಾಗಿದೆ. ನಮ್ಮ ಋಷಿ ಮುನಿಗಳು ಕಂಡುಕೊಂಡ ಯೋಗವಿದ್ಯೆಯನ್ನು ಪತಂಜಲಿ ಮಹರ್ಷಿಗಳು ಕ್ರೋಢೀಕರಿಸಿ, ಯೋಗ ಭಾಷ್ಯದ ಮೂಲಕ, ಯೋಗ ಸೂತ್ರದ ಮೂಲಕ ಜಗತ್ತಿನ ಎಲ್ಲ ಮಾನವರೂ ನಿರೋಗಿಗಳಾಗಬೇಕು ಎನ್ನುವ ಹಿನ್ನೆಲೆಯಲ್ಲಿ ನಮಗೆ ಯೋಗ ಪ್ರದಾನ ಮಾಡಿದ್ದಾರೆ. ದುರ್ದೈವವೆಂದರೆ ನಾವು ಅದನ್ನು ಮರೆತು ಆರೋಗ್ಯವನ್ನು ಇನ್ನೆಲ್ಲೋ ಹುಡುಕಾಡುತ್ತಿದ್ದೇವೆ. ಆದರೆ ಯಾರು ಯೋಗವನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡಿದ್ದಾರೋ ಅವರು ಇದರ ಮಹತ್ವವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್.ಗೀತಾ ಸ್ವಾಗತಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಭಾಗ್ಯಕ್ಕ, ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್ನ ಸುರೇಂದ್ರ, ಭಾರತ್ ಸ್ವಾಭಿಮಾನ್ ಯೋಗ ಶಿಕ್ಷಣ ಸಮಿತಿಯ ಜನಕರಾಜ್, ಅನುವ್ರತ್ ಸಮಿತಿಯ ಅಧ್ಯಕ್ಷೆ ಮಂಜು ಬನ್ಸಾಲಿ, ಮೇರಾ ಯುವ ಭಾರತ್ನ ಜಿಲ್ಲಾ ಸಮನ್ವಯಾಧಿಕಾರಿ ಅಭಿಷೇಕ್, ಎಸ್ಪಿವೈಎಸ್ಎಸ್ ಜಿಲ್ಲಾ ಸಂಚಾಲಕಿ ಶಾರದಾ ರವಿ, ಡಾ.ಗೌರಿ ವರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಭರತ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಪುಟ್ಟರಾಜು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಾಲಾಕ್ಷಪ್ಪ, ಸ್ಕೌಟ್ಸ್ ಅಂಡ್ ಗೈಡ್ಸ್ನ ಕಿರಣ್, ಭಾರತ್ ಸೇವಾದಳದ ಸಂಘಟಕ ಡಾ,ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಯೋಗ ಪಟುಗಳಿಂದ ಯೋಗ ಪ್ರದರ್ಶನ ನಡೆಯಿತು.
The pagan inclination towards yoga is a source of pride for the culture.