ಚಿಕ್ಕಮಗಳೂರು: ನಾವು ಮಾತನಾಡಲು ಮಾತೃ ಭಾಷೆ ಮುಖ್ಯ, ವ್ಯವಹರಿಸಲು ಇಂಗ್ಲೀಷ್ ಅಗತ್ಯ, ಈ ಕಾರಣದಿಂದ ಈ ವರ್ಷದಿಂದಲೇ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಆರಂಭಿಸಿ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ನೀಡಲಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಇಂದು ನಗರ ಹೊರವಲಯದ ಹಿರೇಮಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುಟುಂಬಗಳಿಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸಿ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ನೀಡಿದರೆ ಪೋಷಕರು ಖಂಡಿತವಾಗಿಯೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡುತ್ತಾರೆ. ಮುಂದಿನ ವರ್ಷ ಇದೇ ಶಾಲೆಗೆ ಮಕ್ಕಳು ಹೆಚ್ಚಾಗಿ ಬರುವಂತೆ ಮಾಡಲು ಮಿನಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದೂ ಈ ಸಂದರ್ಭದಲ್ಲಿ ಹೇಳಿದರು.
ಶಿಕ್ಷಣ, ಆರೋಗ್ಯ ಹಾಗೂ ಜನರ ಬದುಕು ಈ ಮೂರು ನಮ್ಮ ಸರ್ಕಾರದ ಮೊದಲ ಆದ್ಯತೆ, ಶಿಕ್ಷಣಕ್ಕೆ ಆದ್ಯತೆ ನೀಡುವ ಮುಖಾಂತರ ಕೊರತೆಯಿರುವ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ನಮ್ಮದೊಂದು ಅಳಿಲು ಸೇವೆ ಈ ಕಟ್ಟಡ ನಿರ್ಮಾಣ ಎಂದು ಹೇಳಿದರು.
ಜನರ ಆರೋಗ್ಯದ ಹಿತದೃಷ್ಟಿಯಿಂದ ರೂ.೮೦ ಕೋಟಿ ಅನುದಾನದಲ್ಲಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಮ್ಮ ಚಿಕ್ಕಮಗಳೂರಿನಲ್ಲಿ ನಿರ್ಮಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.
ಬಸ್ ನಿಲ್ದಾಣ ಸಮಸ್ಯೆಯನ್ನು ಈಗಾಗಲೇ ಗಮನಿಸಿದ್ದು, ಆಗಸ್ಟ್ ತಿಂಗಳಲ್ಲಿ ರೂ.೨೦ ಕೋಟಿ ವೆಚ್ಚದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಮಳೆಗಾಲ ಮುಗಿದ ಕೂಡಲೇ ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ನಗರಸಭೆ ಸದಸ್ಯರಾದ ವಿದ್ಯಾ, ಅರುಣ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವಿಜಯಕುಮಾರ್, ಶಾಲಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಜಯಲಕ್ಷ್ಮೀ. ಮಾಜಿ ನಗರಸಭೆ ಸದಸ್ಯ ಅರುಣ್ ಮುಂತಾದವರು ಉಪಸ್ಥಿತರಿದ್ದರು.
From this year itself LKG-UKG will be introduced in government schools.