ಚಿಕ್ಕಮಗಳೂರು: : ಕ್ಷೇತ್ರದಲ್ಲಿ ಕೆರೆ ತುಂಬಿಸುವ ಕಾರ್ಯವೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ನೆಟ್ಟೇಕೆರೆಹಳ್ಳಿಯಲ್ಲಿ ಇಂದು ಬೆಳಿಗ್ಗೆ ನಡೆದ ನಡೆದ ಕಾರ್ಯಕ್ರಮದಲ್ಲಿ ನೆಟ್ಟೇಕೆರೆಹಳ್ಳಿ ಹಾಗೂ ಸೆಗನೀಪುರ ಗ್ರಾಮಗಳ ‘ವಾಸಿಸುವವನೇ ಒಡೆಯ’ ಯೋಜನೆಯಡಿ ಹಕ್ಕುಪತ್ರ ಹಾಗೂ ಇ-ಸ್ವತ್ತು ಖಾತೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಯನ್ನು ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೂ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಮಳೆ, ಉತ್ತಮ ಬೆಳೆ ಹಾಗೂ ಆ ಬೆಳೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲೆಂದು ತಾವು ಆಶಿಸುವುದಾಗಿ ಹೇಳಿದರು.
೧೯೭೪-೭೫ ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಾಗೂ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಉಳುವವನೇ ಭೂಮಿ ಯೋಜನೆಯನ್ನು ಜಾರಿಗೆ ತಂದು ೫೦ ವರ್ಷವಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಸಿಸುವವನೇ ಒಡೆಯ ಯೋಜನೆಯಡಿ ಕಂದಾಯ ಗ್ರಾಮಗಳನ್ನು ಉಪಗ್ರಾಮಗಳನ್ನಾಗಿಸಿ ಗ್ರಾಮಗಳಲ್ಲಿ ಯಾರ್ಯಾರಿಗೆ ಹಕ್ಕುಪತ್ರ, ಇ-ಸ್ವತ್ತು ಖಾತೆ ಪತ್ರ ಹಾಗೂ ಕ್ರಯಪತ್ರಗಳಿರಲಿಲ್ಲವೋ ಅವರಿಗೆ ಅವುಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ನೆಟ್ಟೇಕೆರೆಹಳ್ಳಿ ಹಾಗೂ ಸೆಗನೀಪುರ ಗ್ರಾಮಗಳ ಸುಮಾರು ೮೨ ಫಲಾನುಭವಿಗಳು ಹಕ್ಕುಪತ್ರಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
ಕರ್ತಿಕೆರೆ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಶ್ರೀನಿವಾಸ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ ಶೆಟ್ಟಿ, ಸದಸ್ಯರುಗಳಾದ ಮೋಹನ್, ಸಿದ್ದರಾಮೇಗೌಡ, ಲೋಕೇಶ್, ಯತೀಶ್, ಚಂದ್ರಶೇಖರ್ ರಾಜ್ ಅರಸ್ ಹಾಗೂ ಸೌಮ್ಯ, ತಹಶೀಲ್ದಾರ್ ಕೆ.ಎಸ್.ರೇಷ್ಮಾಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಗೇಶ್ ಮತ್ತಿತರರು ಭಾಗವಹಿಸಿದ್ದರು.
Greater emphasis on development work in the field