ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮಗಳು ಬೆಳೆಯುತ್ತಿದ್ದಂತೆ ಸುಗಮ ಸಂಗೀತ ಮಾಧ್ಯಮ ನೇಪಥ್ಯಕ್ಕೆ ಸರಿಯುತ್ತಿದೆಯೇನೋ ಎಂಬ ಆತಂಕ ಮೂಡುತ್ತಿದೆ ಎಂದು ಗಾಯಕ, ಸಂಗೀತ ನಿರ್ದೇಶಕ ಮೈಸೂರಿನ ನಿತಿನ್ ರಾಜಾರಾಮ್ ಶಾಸ್ತ್ರಿ ವಿಷಾದ ವ್ಯಕ್ತಪಡಿಸಿದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ಯುರೇಕಾ ಅಕಾಡೆಮಿಯ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪೂರ್ವಿ ಗಾನಯಾನ ೧೦೮ರ ಸರಣಿಯಲ್ಲಿ `ಹಾಡು ಹಳೆಯದಾದರೇನು ಭಾವ ನವನವೀನ’ ಶೀರ್ಷಿಕೆಯ ಕನ್ನಡ ಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪೂರ್ವಿ ನಾದೋಪಾಸನಾ ಪ್ರಶಸ್ತಿ ಪ್ರದಾನ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದೆ ಈಟಿವಿ ಕನ್ನಡ ಚಾನೆಲ್ ಇದ್ದ ಸಂದರ್ಭ ಅತ್ಯುತ್ತಮ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದವು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾರಥ್ಯದ `ಎದೆ ತುಂಬಿ ಹಾಡುವೆನು’, ರವಿ ಬೆಳಗೆರೆ ನಿರೂಪಣೆಯ `ಎಂದೂ ಮರೆಯದ ಹಾಡು’ ಹಾಗೆಯೇ ಪ್ರಣಯರಾಜ ಶ್ರೀನಾಥ್ ಅವರ ನಿರ್ವಹಣೆಯ `ಸ್ನೇಹದ ಕಡಲಲ್ಲಿ’ ಕಾರ್ಯಕ್ರಮ ತುಂಬಾ ಗಮನ ಸೆಳೆಯುತ್ತಿದ್ದವು. ಇಂದು ಆ ಮಟ್ಟಿಗಿನ ವಿಶೇಷ ಕಂಡು ಬರುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಕಲಾವಿದೆ ಪದ್ಮಾ ವಾಸಂತಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಮಾನಸ ಸರೋವರ ಚಲನಚಿತ್ರ ಬಿಡುಗಡೆಯಾಗಿ ೪೨ ವರ್ಷಗಳು ಕಳೆದಿವೆ. ಆದರೂ ಜನರು ನನ್ನನ್ನು ಮರೆತಿಲ್ಲ. ಅಂದು ರಸ್ತೆಯಲ್ಲಿ ಹೋಗುತ್ತಿದ್ದ ನನ್ನನ್ನು ಗುರುತಿಸಿ ಪುಟ್ಟಣ್ಣ ಕಣಗಾಲ್ ಅವರು ಅವಕಾಶ ನೀಡಿದ್ದು, ೨೪ ಗಂಟೆಗಳಲ್ಲಿ ತಾವು ಹಿರೋಯಿನ್ ಆದ ಸಂತಸವನ್ನು ಹಂಚಿಕೊಂಡರು.
ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ವಿಶ್ವದಲ್ಲೇ ವಿಶೇಷವಾದ ದಿನ ೧೯೮೨ ರಲ್ಲಿ ಪ್ಯಾರೀಸ್ನಲ್ಲಿ ವಿಶ್ವ ಸಂಗೀತ ದಿನಾಚರಣೆ ಪ್ರಾರಂಭವಾಯಿತು. ಇಂದು ೧೭೦ ದೇಶಗಳ ೧೦೦೦ ನಗರಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದೀಗ ನಡೆಯುತ್ತಿರುವುದು ಪೂರ್ವಿ ಗಾನಯಾನದ ಗಾಯನ ೧೦೮ನೇ ಸರಣಿಯದು, ೧೦೮ ಸಂಖ್ಯೆ ಹಿಂದೂಗಳು, ಜೈನರು ಹಾಗೂ ಸಿಖ್ಖರಿಗೆ ಶ್ರೇಷ್ಠವಾಗಿದ್ದು, ಅಧ್ಯಾತ್ಮದ ಸಂಬಂಧವಿರುವುದರಿಂದ ಅತ್ಯಂತ ವಿಶೇಷವಾಗಿದೆ. ಈ ಸಾಧನೆಯಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಮುಖ್ಯಸ್ಥ ಎಂ.ಎಸ್.ಸುಧೀರ್ ಅವರ ಸಾಧನೆ ಅಮೋಘ ಎಂದರು.
ಶಾಸಕ ಹೆಚ್.ಡಿ.ತಮ್ಮಯ್ಯ, ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಪತ್ರಕರ್ತ ಪಿ.ರಾಜೇಶ್ ಮಾತನಾಡಿದರು. ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಿದ್ದರು. ಕಲಾಪೋಷಕ ನಾರಾಯಣ ಮಲ್ಯ ಉಪಸ್ಥಿತರಿದ್ದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಪ್ರಾಸ್ತಾವಿಕ ಮಾತನಾಡಿದರು. ಸುಮಾ ಪ್ರಸಾದ್ ಹಾಗೂ ರೂಪಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
`ಎದೆತುಂಬಿ ಹಾಡುವೆನು’ ಸ್ಟಾರ್ ಸಿಂಗರ್ ಖ್ಯಾತಿಯ ಮೈಸೂರಿನ ನಿತಿನ್ ರಾಜಾರಾಮ್ ಶಾಸ್ತ್ರಿ, ಶಿವಮೊಗ್ಗದ ಸುರೇಖಾ ಹೆಗಡೆ, ಝೀ ಸರಿಗಮಪ ಜ್ಯೂರಿ ಖ್ಯಾತಿಯ ರಮ್ಯಾ ಪ್ರಸನ್ನ, ನಮ್ಮ ಜಿಲ್ಲೆಯ ಗಾಯಕಿ ಕೊಪ್ಪದ ಭಾಗ್ಯಶ್ರೀ ಗೌಡ, ಹಾಸನದ ಚೇತನ್ರಾಮ್ ಇವರ ಜೊತೆ ಪೂರ್ವಿಯ ಗಾಯಕರಾದ ಕವಿತಾ ನಿಯತ್, ದೀಪಕ್ ಪಿ.ಎಸ್., ರೂಪ ಅಶ್ವಿನ್, ರಾಯ ನಾಯಕ್, ಅನುಷ, ರುಕ್ಸಾನಾ ಕಾಚೂರ್, ಸುಂದರಲಕ್ಷ್ಮೀ, ಸಾತ್ವಿಕ್, ಚೈತನ್ಯ, ಪೃಥ್ವಿಶ್ರೀ, ಶಿರಸಿಯ ಅನುರಾಧ ಭಟ್, ಹೈದರಾಬಾದ್ನ ಶ್ವೇತಾ ಭಾರದ್ವಾಜ್, ಇವರೆಲ್ಲರೂ ಎಂ.ಎಸ್.ಸುಧೀರ್ ಅವರ ಗಾಯನ ಸಾರಥ್ಯದಲ್ಲಿ `ಮಾನಸ ಸರೋವರ’ ಚಿತ್ರವೂ ಸೇರಿದಂತೆ ಅನೇಕ ಗೀತೆಗಳಿಗೆ ಧ್ವನಿಯಾಗಿ ಸಂಗೀತ ಪ್ರಿಯರನ್ನು ರಂಜಿಸಿದರು.
Smooth musical accompaniment from social media