ಚಿಕ್ಕಮಗಳೂರು: ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಪರಿಸರ ರಕ್ಷಣೆ ಇಂತಹ ಅನೇಕ ಸಮಾಜಮುಖಿ ಉತ್ತಮ ಕಾರ್ಯಕ್ರಮಗಳನ್ನು ಇನ್ನರ್ ವೀಲ್ ಸಂಸ್ಥೆ ಆಯೋಜನೆ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ. ಗೀತಾ ಹೇಳಿದರು.
ಅವರು ಟಿಎಂಎಸ್ನ ಎಂಎಲ್ವಿ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಚಿಕ್ಕಮಗಳೂರು ಜಿಲ್ಲೆ-೩೧೮ ಇದರ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಯನಾ ಸಂತೋಷ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದಿಸಿ ಶುಭಾಶಯ ಕೋರಿ ಮಾತನಾಡಿದರು.
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಯೋಜನೆ, ಯೋಚನೆಗಳ ಮೂಲಕ ಕರ್ತವ್ಯ ನಿರತರಾಗಬೇಕೆಂದು ಕರೆನೀಡಿದರು.
ಸಮಾಜದಲ್ಲಿ ಆಶಕ್ತರನ್ನು ಕಂಡಾಗ ನಮ್ಮ ಸಹಾಯಹಸ್ತ ಬಯಸುವವರಿಗಾಗಿ ಅಂತಹ ಬಡವರನ್ನು ಗುರ್ತಿಸಿ ಸಹಾಯ ಸೇವೆ ನೀಡುವುದೇ ಇನ್ನರ್ ವೀಲ್ ಸಂಸ್ಥೆಯ ಪ್ರಮುಖ ಉದ್ದೇಶ ಎಂದ ಅವರು, ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ನ ಹೆಚ್ಚು ಸದಸ್ಯರು ವಿಮುಖರಾಗುತ್ತಿದ್ದಾರೆ. ಈ ಮಧ್ಯೆ ಈ ಕ್ಲಬ್ನಲ್ಲಿ ದಾನಿಗಳಾಗಿರುವ ೧೫ ನೂತನ ಸದಸ್ಯರು ಸದಸ್ಯತ್ವ ಪಡೆದುಕೊಂಡಿರುವುದರಿಂದ ಈ ಮೂಲಕ ಕ್ಲಬ್ ಉತ್ತಮವಾಗಿ, ಸುಲಲಿತವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
೧೯೭೩ ರಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭಗೊಂಡ ಇನ್ನರ್ವೀಲ್ ಕ್ಲಬ್ ಭಾರತದಲ್ಲಿ ೧೯೫೬ ರಲ್ಲಿ ಅಹಮದಾಬಾದ್ನಲ್ಲಿ ಆರಂಭವಾಯಿತು. ಇಂತಹ ಇಂಟರ್ ನ್ಯಾಷನಲ್ ಕ್ಲಬ್ಗೆ ನಾವುಗಳೆಲ್ಲರು ಸದಸ್ಯರಾಗಿರುವುದು ಸಂತಸದ ಜೊತೆಗೆ ಹೆಮ್ಮೆ ಎಂದು ಹೇಳಿದರು.
ಹೃದಯ ಶ್ರೀಮಂತಿಕೆ ಹೊಂದಿದ್ದರೆ ಮನಸ್ಸು ಬಂದಾಗ ಇನ್ನೊಂದು ಮಹಿಳಾ ಜೀವನ ಸಂಧ್ಯಾ ಪ್ರಾರಂಭಿಸಬಹುದು ಎಂದು ಸಲಹೆ ನೀಡಿದ ಅವರು, ಆ ಶಕ್ತಿ ನಿಮ್ಮೆಲ್ಲರಲ್ಲಿದೆ ಎಂದು ಭಾವಿಸುತ್ತೇನೆ, ದೂರದೃಷ್ಟಿ ಜೊತೆಗೆ ಘೋಷವಾಕ್ಯವಿದ್ದಾಗ ಮಾತ್ರ ಇಂತಹ ಸಾರ್ವಜನಿಕ ಸಂಸ್ಥೆಗಳಲ್ಲಿ ಉತ್ತಮವಾಗಿ, ಸಾಂಘಿಕವಾಗಿ ನಡೆಯಲು ಸಾಧ್ಯ ಎಂದರು.
ನೂತನ ಅಧ್ಯಕ್ಷರಾಗಿ ನಯನಾ ಸಂತೋಷ್ ಆಯ್ಕೆಯಾಗಿದ್ದು, ಮೂರನೇ ಬಾರಿಗೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ತೃಪ್ತಿ ಮತ್ತು ಹೆಮ್ಮೆ ತಂದಿದೆ, ಇದೊಂದು ಇನ್ನರ್ ವೀಲ್ ಕ್ಲಬ್ಗೆ ತಾವು ಹೊಂದಿರುವ ಅವಿನಾಭಾವ ಸಂಬಂಧ ಎಂದು ಹೇಳಿದರು.
ನೂತನ ಅಧ್ಯಕ್ಷರು ವೇದಿಕೆಯಲ್ಲಿ ಸಂತೋಷ, ದುಃಖ, ಆಶ್ಚರ್ಯ ಇವೆಲ್ಲವುಗಳ ಮಧ್ಯೆ ಇಂದು ವಿರಾಜಮಾನರಾಗಿ, ವಿಜೃಂಭಿಸಿ ವಿರಮಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಂತೋಷ ನಿಮ್ಮಿಂದ ದೊರೆಯಲಿ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಜೀವನದಲ್ಲಿ ಸಂಸ್ಕೃತಿ ಸಂಸ್ಕಾರ ಇವುಗಳನ್ನು ಸರಿಯಾದ ರೀತಿಯಲ್ಲಿ ಉಳಿಸಿ-ಬೆಳೆಸಿದಾಗ ಮುಂದಿನ ಪೀಳಿಗೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಹಕಾರಿಯಾಗಲಿದೆ, ಕಷ್ಟದ ಅರಿವು ತಮ್ಮ ಮಕ್ಕಳಲ್ಲಿ ಬೆಳೆಸಬೇಕು ಆಗ ಮಾತ್ರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷೆ ನಯನಾ ಸಂತೋಷ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಜನಪರವಾಗಿ ಸೇವೆ ಸಲ್ಲಿಸುತ್ತಿರುವ ಇನ್ನರ್ ವೀಲ್ ಕ್ಲಬ್ಗೆ ತಾವು ಅಧ್ಯಕ್ಷರಾಗಿ ಆಯ್ಕೆಮಾಡಿರುವುದಕ್ಕೆ ಆಬಾರಿಯಾಗಿದ್ದೇನೆ, ಇದೂವರೆಗೆ ಕ್ಲಬ್ನ ಎಲ್ಲಾ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸಿದರು.
ಮಾಜಿ ಅಧ್ಯಕ್ಷೆ ಶಾಲಿನಿ ನಾಗೇಶ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು ತೃಪ್ತಿ ತಂದಿದೆ. ಈ ಎಲ್ಲಾ ಕಾರ್ಯಗಳಲ್ಲಿ ಸಹಕರಿಸಿದ ಕ್ಲಬ್ನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಲಬ್ನ ಉಪಾಧ್ಯಕ್ಷೆ ಮಾಲವಿ ರಘುನಂದನ್, ಕಾರ್ಯದರ್ಶಿ ಶಾಲಿನಿ ನಾಗೇಶ್, ಖಜಾಂಚಿ ಸ್ನೇಹ ಸಂತೋಷ್, ಐಎಸ್ಓ ಸೌನಲ್ಯ ನಟರಾಜ್, ಎಡಿಟರ್ ನವ್ಯ ಅಮಿತ್ ಮತ್ತಿತರರು ಉಪಸ್ಥಿತರಿದ್ದರು.
Innerwheel Club should take up social work