ಚಿಕ್ಕಮಗಳೂರು: ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಗಾಂಜಾ ಮಾರಾಟ ಹಾಗೂ ಸೇವನೆ ಸೇರಿದಂತೆ ಮಾದಕ ವಸ್ತುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಎಸ್ಪಿ ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಲವೆಡೆ ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಗಲವೆ ಸೃಷ್ಟಿ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಇಂಥವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಚಿಕ್ಕಮಗಳೂರು ನಗರದ ಸಾಯಿ ಮಧುವನ ಬಡಾವಣೆಯಲ್ಲಿರುವ ಪಾರ್ಕ್, ಗೌರಿ ಕಾಲುವೆ ನರಿಗುಡ್ಡನಹಳ್ಳಿ ವೃತ್ತದಲ್ಲಿರುವ ಖಾಲಿ ನಿವೇಶನಗಳು, ಎಐಟಿ ವೃತ್ತ, ವಾಜಪೇಯಿ ಲೇಔಟ್, ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿದಿನ ಗಾಂಜಾ ಸೇವಿಸಿ ಕೆಲವರು ಬೈಕ್ ವೀಲಿಂಗ್ ಮಾಡುವ ಜೊತೆಗೆ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕೃತ್ಯಗಳು ಇನ್ನಷ್ಟು ಹೆಚ್ಚುವ ಮೊದಲೇ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ವಿಕ್ರಮ ಅಮಟೆ, ಎಲ್ಲಿಯಾದರೂ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಬಗ್ಗೆ ಮಾಹಿತಿ ತಿಳಿದಲ್ಲಿ ಸಾರ್ವಜನಿಕರು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಸಹಾಯವಾಣಿ 1908ಗೆ ಕರೆಮಾಡಿ ಮಾಹಿತಿ ನೀಡಬೇಕು. ಅಥವಾ ಡ್ರಗ್ ಫ್ರೀ ಕರ್ನಾಟಕ ಆಪ್ ಮೂಲಕ ಮಾಹಿತಿ ನೀಡಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಇದೊಂದು ಸಾಮಾಜಿಕ ಪಿಡುಗು. ಮಾದಕ ವಸ್ತು ಮಾರಾಟದ ಮೂಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ. ಜನರು ಇನ್ನಷ್ಟು ಮುಕ್ತವಾಗಿ ಈ ಬಗ್ಗೆ ಮಾಹಿತಿ ನೀಡಿದಲ್ಲಿ ಪರಿಣಾಮಕಾರಿಯಾಗಿ ಮಾದಕ ವಸ್ತು ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾದಕ ವಸ್ತು ಮಾರಾಟ ಮಾಡುವವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಮಾದಕ ವಸ್ತು ಸೇವನೆ ಮಾಡುವವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಬಳಿಕ ಅವರನ್ನು ಕೌನ್ಸಲಿಂಗ್ ಒಳಪಡಿಸಿ ಡಿಅಡಿಕ್ಷನ್ ಸೆಂಟರ್ ಗೆ ದಾಖಲು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಮುಖರಾದ ಸಚಿನ್ ಗೌಡ, ಅಂಕಿತಾ ಮತ್ತಿತರರಿದ್ದರು.
BJP Yuva Morcha urges control of drugs