ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ ಟ್ರಸ್ಟ್ನ ಅಧ್ಯಕ್ಷರಾದ ಜಯಂತ್ ಪೈ, ಪ್ರಭು ತಿಳಿಸಿದರು.
ಅವರು ಇಂದು ಶಾರದ ಪೈ ಕಲ್ಯಾಣ ಮಂಟಪದಲ್ಲಿ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಗುರುವನ್ನು ಅರಿವಿನ ಸಾಗರ ಎಂದು ಕರೆಯುತ್ತಾರೆ ಸರ್ವರ ಹಿತ ಬಯಸುವ ಗುರುಗಳನ್ನು ಭಕ್ತಿ ಕೃತಜ್ಞತೆಯಿಂದ ಸ್ಮರಿಸಿ ಪೂಜಿಸುವ ಕಾರ್ಯಕ್ರಮವೇ ಗುರುಪೂರ್ಣಿಮೆ ಆಗಿದೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ ಗುರುಗಳು ಜೀವನದ ಕತ್ತಲನ್ನು ದೂರಮಾಡಿ ಬೆಳಕಿನೆಡೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದರು, ವಿದ್ಯಾರ್ಥಿಗಳು ಗುರುಗಳ ಮತ್ತು ಪೋಷಕರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಉನ್ನತ ವ್ಯಾಸಂಗ ಮಾಡಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ ನಿಮ್ಮದಾಗಿಸಿಕೊಳ್ಳಬೇಕು ಎಂದರು.
ಪ್ರತಿ ವರ್ಷ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡುವುದರ ಜೊತೆಗೆ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಸುರೇಶ್ಪೈ, ಬಾಬುಕಾಮತ್, ವ್ಯವಸ್ಥಾಪಕ ಲಕ್ಮಣ್ಕಾಮತ್ ಉಪಸ್ಥಿತರಿದ್ದರು. ಗುರುಪೂರ್ಣಿಮೆ ಕಾರ್ಯಕ್ರಮದ ಬಗ್ಗೆ ನಾರಾಯಣ ಮಲ್ಯ ಮಾತನಾಡಿದರು. ಅರ್ಚಕ ಕೃಷ್ಣಭಟ್ ನೇತೃತ್ವದಲ್ಲಿ ಗಣಪತಿ ಹೋಮ, ಪೂರ್ಣಾಹುತಿ, ಸತ್ಯನಾರಾಯಣ ವ್ರತ ಮತ್ತು ಕಥಾಶ್ರವಣ ನಡೆದ ಬಳಿಕ ಗುರು ಪೂಜೆ, ಪಾದುಕ ಪೂಜೆ, ಗುರುಕಾಣಿಕೆಯೊಂದಿಗೆ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಿದರು.
The Guru dispels the darkness of ignorance and illuminates the light of wisdom.